ಮೈಸೂರು: ಸ್ಪರ್ಧಾತ್ಮಕ ಜಗತ್ತು ಸಾಗರದಂತೆ, ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ಹೆಚ್ಚಿನ ಬದಲಾವಣೆಗಳು, ಒತ್ತಡಗಳಿದ್ದು, ಎಲ್ಲದಕ್ಕೂ ಸಿದ್ಧರಿರಬೇಕು ಎಂದು ಮೈಸೂರು ಮಹಾ ನಗರ ಪಾಲಿಕೆ ಹೆಚ್ಚುವರಿ ಆಯುಕ್ತರಾದ ಬಿ.ಎಂ.ವೀಣಾ ಹೇಳಿದರು.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ನಡೆಸಿದ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಕ್ತಭಂಡಾರ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಿರಂತರ ಅಭ್ಯಾಸ, ಸತತ ಕಠಿಣ ಪರಿಶ್ರಮದಿಂದ ಮಾತ್ರ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ. ಓದುವಾಗ ಎಚ್ಚರಿಕೆಯಿಂದ, ವಿವೇಚನೆಯಿಂದ ಓದುವುದು ಉತ್ತಮ. ನಿತ್ಯ ದಿನಪತ್ರಿಕೆ ಓದಲು ಒತ್ತು ನೀಡಿ, ಸಾಮಾನ್ಯ ಜ್ಞಾನದ ಅರಿವಿರಲಿ ಎಂದು ಕಿವಿಮಾತು ಹೇಳಿದರು.
ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಯಂತಹ ಪರೀಕ್ಷೆಗಳಿಗೆ ಹೆಚ್ಚು ತಯಾರಿ ಮುಖ್ಯ. ಓದುವಾಗ ಯಾವಾಗಲೂ ವ್ಯಕ್ತಿಯೊಬ್ಬರನ್ನು ಮಾದರಿಯನ್ನಾಗಿಟ್ಟುಕೊಂಡಾಗ ಆಸಕ್ತಿ ಹೆಚ್ಚಾಗುತ್ತದೆ. ನಾವೆಲ್ಲಾ ಓದುವಾಗ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ಹೆಚ್ಚಾಗಿ ಅನುಕರಿಸುತ್ತಿದ್ದೆವು ಎಂದು ಸ್ಮರಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಕಷ್ಟ ಪಡಬೇಕು, ಗೆಲುವು-ಸೋಲು ಸಾಮಾನ್ಯ. ಸೋತರೆ ಕುಗ್ಗದೇ ನಿರಂತರ ಪ್ರಯತ್ನ ಪಡಬೇಕು, ಆಗ ಗೆಲುವು ನಿಶ್ವಿತ ಎಂದು ವೀಣಾ ಅವರು ತಿಳಿಸಿದರು.
ವಾಣಿಜ್ಯ ತೆರಿಗೆ ಇಲಾಖೆಯ ಮೈಸೂರು ವಿಭಾಗದ ಜಂಟಿ ಆಯುಕ್ತ ಎಂ.ಬಾಲಸುಬ್ರಹ್ಮಣ್ಯ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ದೂರದ ಪಯಣದಂತೆ, ಪರಿಶ್ರಮ ಮುಖ್ಯ. ನಿಮಗೆ ಅನುಕೂಲವಾಗುವಂತೆ ಅಭ್ಯಾಸ ಮತ್ತು ಸಂವಹನ ಕೌಶಲ್ಯ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.
ಕರಾಮುವಿ ಕುಲಪತಿ ಪ್ರೊ.ಶರಣಪ್ಪ ಹಲಸೆ ಮಾತನಾಡಿ, ಧೈರ್ಯ ಇದ್ದರೆ ಏನನ್ನಾದರೂ ಸಾಧಿಸಬಹುದು. ಸಮಾಜದಲ್ಲಿ ನ್ಯಾಯಯುತ ಬದುಕು ಕಟ್ಟಿಕೊಳ್ಳಬೇಕು. ಗುರಿ ಇಟ್ಟುಕೊಂಡು ತಯಾರಿ ನಡೆಸಬೇಕು. ಸಾಧನೆಗೆ ಸತತ ಪ್ರಯತ್ನವಿರಬೇಕು. ಅರಿವೇ ಗುರು ಎನ್ನುವ ಹಾಗೆ ನಿಮ್ಮನ್ನು ನೀವು ನಂಬಿ ಎಂದು ಸಲಹೆ ನೀಡಿದರು.
ಕರಾಮುವಿ ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್, ಶೈಕ್ಷಣಿಕ ಡೀನ್ ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರು, ಗಣೇಶ್ ಮತ್ತಿತರರು ಹಾಜರಿದ್ದರು.
