ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ನಾಡಕುಸ್ತಿ ಪಂದ್ಯಾವಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.
ಈ ವೇಳೆ ಸಿಎಂ, ಕುಸ್ತಿಪಟುಗಳಿಗೆ ಭುಜ ತಟ್ಟುವ ಮೂಲಕ ಶುಭ ಕೋರಿದರು.
ನಗರದ ಕರ್ನಾಟಕ ವಸ್ತು ಪ್ರದರ್ಶನದ ಪ್ರಾಧಿಕಾರ ಆವರಣದ ಡಿ.ದೇವರಾಜು ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ನಾಡಕುಸ್ತಿ ಪಂದ್ಯಾವಳಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ಮಂಗಳಾರತಿ ನೆರವೇರಿಸಿ, ಮೊದಲ ಮಾರ್ಫಿಟ್ ಕುಸ್ತಿಯನ್ನು ಕೆಲ ಸಮಯ ವೀಕ್ಷಿಸಿ ಕುಸ್ತಿ ಪಟುಗಳನ್ನು ಪ್ರೋತ್ಸಾಹಿಸಿದರು.
2025ನೇ ದಸರಾ ಕಂಠೀರವ ಪ್ರಶಸ್ತಿ ವಿಜೇತ ಬೆಳಗಾವಿಯ ಪೈಲ್ವಾನ್ ಕಾಮೇಶ್ ಪಾಟೀಲ್ ಹಾಗೂ ಮಹಾರಾಷ್ಟ್ರದ ಪೈಲ್ವಾನ್ ಶ್ರೀಮಂತ್ ಬ್ಹೊಸ್ಲೆ ನಡುವೆ ಮೊದಲ ಮಾರ್ಫಿಟ್ ಕುಸ್ತಿ ರೋಚಕವಾಗಿ ನಡೆಯಿತು. ಇದಕ್ಕ ತೀರ್ಪುಗಾರರಾಗಿ ಪೈಶ್ರೀನಿವಾಸ್ ಹಾಗೂ ಪೈ.ಮಹೇಶ್ ಕಾರ್ಯನಿರ್ವಹಿಸಿದರು.
ಕ್ರೀಡಾಭಿಮಾನಿಗಳು ತಡವಾಗಿ ಕುಸ್ತಿ ಪಂದ್ಯಾವಳಿ ಪ್ರಾರಂಭಗೊಂಡರೂ ಕೂಡಾ ಶಿಳ್ಳೆ ಚಪ್ಪಾಳೆ ಮೂಲಕ ಕುಸ್ತಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು.
