ಬೆಂಗಳೂರು: ಕನ್ನಡ ಜಾನಪದ ಪರಿಷತ್ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಆಯೋಜಿಸಿದ್ದ ಪ್ರಥಮ ಜಾನಪದ ಮಹಿಳಾ ಸಮ್ಮೇಳನದಲ್ಲಿ
ಜಾನಪದ ಹೆಣ್ಣಿನ ಹೆಜ್ಜೆ ಗುರುತುಗಳ ಕುರಿತು ಚಿಂತನ-ಮಂಥನ ನಡೆಯಿತು.
ಬೆಂಗಳೂರಿನ ವಿಜಯನಗರದಲ್ಲಿರುವ ಜ್ಞಾನಸೌಧ ಸಭಾಂಗಣದಲ್ಲಿ ಡಾ ಪದ್ಮ ನಾಗರಾಜ್ ಅವರ ಸರ್ವಾಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪ್ರಥಮ ಜಾನಪದ ಮಹಿಳಾ ಸಮ್ಮೇಳನದಲ್ಲಿ ಮಹಿಳಾ ಜಾನಪದ ಸಾಹಿತ್ಯ ಮತ್ತು ಪರಂಪರೆಯಲ್ಲಿ ಮಹಿಳೆಯರ ಪಾತ್ರವನ್ನು ಪರಿಚಯಿಸುವ ಉದ್ದೇಶದಿಂದ ಎರಡು ಮಹತ್ವದ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು.
ಗೋಷ್ಠಿ-1: ಜಾನಪದ ಸಾಹಿತ್ಯದಲ್ಲಿ ಮಹಿಳಾ ಸ್ಮಿತೆಯ ಅನಾವರಣ
ಜಾನಪದ ಸಾಹಿತ್ಯದಲ್ಲಿ ಮಹಿಳೆಯರ ಭಾವನೆಗಳು, ಅನುಭವಗಳು, ಬದುಕಿನ ಮೌಲ್ಯಗಳು ಹಾಗೂ ಸಾಮಾಜಿಕ ಪ್ರಜ್ಞೆ ಹೇಗೆ ಅನಾವರಣಗೊಂಡಿವೆ ಎಂಬ ವಿಷಯದ ಕುರಿತು ಡಾ. ಗೋರೂರು ಪಂಕಜ ಅವರು ವಿಚಾರ ಮಂಡಿಸಿದರು.
ಮಹಿಳೆಯರ ಬದುಕಿನ ಅನುಭವಗಳು ಹಾಡು, ಕಥೆ, ಲಾವಣಿ, ಸೋಬಾನೆ ಪದಗಳು ಹಾಗೂ ವಿವಿಧ ಜಾನಪದ ಅಭಿವ್ಯಕ್ತಿಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ಹರಿದುಬಂದಿವೆ. ಮಹಿಳೆಯರ ಸುಖ-ದುಃಖ, ಕುಟುಂಬದ ಜವಾಬ್ದಾರಿ, ಸಾಮಾಜಿಕ ಅಸಮಾನತೆಗಳ ವಿರುದ್ಧದ ಮೌನ ಪ್ರತಿಭಟನೆ ಹಾಗೂ ಸ್ವಾಭಿಮಾನದ ಭಾವನೆಗಳು ಜಾನಪದ ಸಾಹಿತ್ಯದಲ್ಲಿ ಜೀವಂತವಾಗಿ ಮೂಡಿಬಂದಿವೆ ಎಂಬ ವಿಚಾರಗಳನ್ನು ಗೋಷ್ಠಿಯಲ್ಲಿ ಚರ್ಚಿಸಲಾಯಿತು.
ಗೋಷ್ಠಿ–2: ಜಾನಪದ ಹೆಣ್ಣಿನ ಹೆಜ್ಜೆ ಗುರುತುಗಳು
ಜಾನಪದ ಪರಂಪರೆಯ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಮತ್ತು ಅವರ ಬದುಕಿನ ಹೆಜ್ಜೆ ಗುರುತುಗಳ ಕುರಿತು ಡಾ. ನಂದಿನಿ ಅವರು ವಿಚಾರ ಮಂಡಿಸಿದರು. ಕೃಷಿ ಚಟುವಟಿಕೆಗಳಿಂದ ಹಿಡಿದು ಕುಟುಂಬದ ಸಂಸ್ಕಾರಗಳು, ಹಬ್ಬ-ಹರಿದಿನಗಳು, ಮದುವೆಯ ಆಚರಣೆಗಳು, ತೊಟ್ಟಿಲು ಹಾಡುಗಳು, ಸೋಬಾನೆ ಪದಗಳು ಹಾಗೂ ದುಡಿಮೆಯ ಹಾಡುಗಳವರೆಗೆ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರು ಕೇವಲ ಜಾನಪದ ಪರಂಪರೆಯ ವಾಹಕರಲ್ಲ; ಅದರ ಸೃಷ್ಟಿಕರ್ತರು, ಸಂರಕ್ಷಕರು ಮತ್ತು ಮುಂದಿನ ಪೀಳಿಗೆಗೆ ವರ್ಗಾಯಿಸುವ ಸಾಂಸ್ಕೃತಿಕ ಶಕ್ತಿಯೂ ಆಗಿದ್ದಾರೆ ಎಂಬುದನ್ನು ಈ ಗೋಷ್ಠಿ ಎತ್ತಿಹಿಡಿಯಿತು.
ಎರಡೂ ಗೋಷ್ಠಿಗಳ ಅಧ್ಯಕ್ಷತೆಯನ್ನು ಪ್ರೊ. ಕೆ. ಎಸ್. ಕೌಜಲಗಿ ಅವರು ವಹಿಸಿದ್ದರು. ಮಹಿಳಾ ಜಾನಪದದ ವಿವಿಧ ಆಯಾಮಗಳು, ಜನಪದ ಪರಂಪರೆಯಲ್ಲಿ ಮಹಿಳೆಯರ ಸ್ಥಾನಮಾನ ಹಾಗೂ ಅವರ ಕೊಡುಗೆಗಳನ್ನು ಗುರುತಿಸುವ ಅಗತ್ಯದ ಕುರಿತು ಚರ್ಚೆ ನಡೆಯಿತು.
ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಎಸ್. ಬಾಲಾಜಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕನ್ನಡ ಜಾನಪದ ಪರಿಷತ್ ಘಟಕದ ಅಧ್ಯಕ್ಷರಾದ ರಾ. ನರಸಿಂಹಮೂರ್ತಿ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಡಾ. ರಾಜು ಗುಂಡಾಪುರ, ರಾಯಚೂರು ಜಿಲ್ಲಾಧ್ಯಕ್ಷರಾದ ರೇಖಾ ಕೇಶವ ರೆಡ್ಡಿ, ಬೆಂಗಳೂರು ದಕ್ಷಿಣ ತಾಲೂಕು ಅಧ್ಯಕ್ಷರಾದ ಸುನಿತಾ ರೆಡ್ಡಿ, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಕೆ. ಸಿ. ಕಾಂತಪ್ಪ, ವಿಜಯಪುರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪುಂಡಲಿಕ್ ಮುರಾಲ್, ಪ್ರೊ. ಎ. ಆರ್. ಅಂಬಿಕಾ, ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷರಾದ ಸವಿತಾ ಕುಮಾರ್ ಹಾಗೂ ವಿಜಯನಗರ ಕ್ಷೇತ್ರದ ಅಧ್ಯಕ್ಷರಾದ ಸೌಮ್ಯ ರಾಜು ಉಪಸ್ಥಿತರಿದ್ದರು.
