ಬೆಂಗಳೂರು: ಕಾವೇರಿ ವಿಚಾರದಲ್ಲಿ ನಾವು ರೈತರನ್ನು ಬದುಕಿಸಬೇಕು, ಕುಡಿಯುವ ನೀರನ್ನೂ ಪೂರೈಸಬೇಕು, ತಮಿಳುನಾಡು ಪಾಲಿನ ನೀರು ಹರಿಸಬೇಕೆಂಬ ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
15ರಂದು ಕಾವೇರಿ ಮಂಡಳಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ನಮ್ಮ ರಾಜ್ಯದ ವಾದ ಮಂಡಿಸುತ್ತೇವೆ, ನಂತರ ತೀರ್ಮಾನವನ್ನು ತಿಳಿಸುತ್ತೇವೆ ಎಂದು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ,ಕಾವೇರಿ ನೀರು ಬಿಡುವಂತೆ ಮಂಡ್ಯದವರು, ಶ್ರೀರಂಗಪಟ್ಟಣದವರು, ಜಿಲ್ಲಾ ಸಚಿವರು ಬಂದು ಭೇಟಿ ಮಾಡಿದ್ದರು. ಸಭೆ ಬಳಿಕ ತೀರ್ಮಾನ ತಿಳಿಸುತ್ತೇವೆ ಎಂದು ಹೇಳಿದ್ದೇನೆ ಎಂದರು.
ಕೆಪಿಎಸ್ ಸಿ ಅಧ್ಯಕ್ಷರ ಅಮಾನತ್ತಿನ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ, ರಾಜ್ಯಪಾಲರು ಈ ಆದೇಶ ಮಾಡಿದ್ದಾರೆ. ಅವರ ನಂತರ ಯಾರು ಹಿರಿಯರು ಇದ್ದಾರೋ ಅವರಿಗೆ ಜವಾಬ್ದಾರಿ ನೀಡುವಂತೆ ನಿರ್ದೇಶನ ನೀಡಿದ್ದೇನೆ ಎಂದು ಸಿಎಂ ಉತ್ತರಿಸಿದರು.
ತಿರುಪತಿಯಲ್ಲಿ ಮೊದಲ ಆರತಿ ಕರ್ನಾಟಕ ರಾಜ್ಯದವರಿಗೆ ಎಂಬ ತೀರ್ಮಾನದ ಬಗ್ಗೆ ಕೇಳಿದಾಗ,ತಿರುಪತಿಯಲ್ಲಿ ಮಹಾರಾಜರ ಕಾಲದಿಂದಲೂ ಮೊದಲ ಆರತಿ ಕರ್ನಾಟಕದ್ದಾಗಿದೆ. ಅಲ್ಲಿ ಪ್ರತಿದಿನ ಅಧಿಕಾರಿಯೊಬ್ಬರು ಆರತಿ ಪಡೆಯುತ್ತಾರೆ. ಆ ಅಧಿಕಾರಿ ಬದಲಿಗೆ ಇಲ್ಲಿಂದ ದರ್ಶನಕ್ಕೆ ಹೋಗುವ ಜನಪ್ರತಿನಿಧಿಗಳು, ನ್ಯಾಯಾಧೀಶರು, ಅಧಿಕಾರಿಗಳಿಗೆ, ಸಂಸದರು, ಮೇಯರ್, ತಹಶೀಲ್ದಾರ್ ಸೇರಿದಂತೆ ನಮ್ಮ ರಾಜ್ಯದವರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು
ಇದು ನಿರ್ದಿಷ್ಟ ಪಕ್ಷಕ್ಕೆ ಎಂದು ಸೀಮಿತವಲ್ಲ. ಯಾವುದೇ ಪಕ್ಷದ ಜನಪ್ರತಿನಿಧಿಗಳು ಹೋದರೂ ಈ ಅವಕಾಶ ಅವರಿಗೆ ಸಿಗಬೇಕು. ಇದಕ್ಕೆ ನಿರ್ದಿಷ್ಟ ಮಾರ್ಗಸೂಚಿಗಳಿದ್ದು, ಅದರಂತೆಯೇ ಈ ಅವಕಾಶ ನೀಡಲಾಗುವುದು. ನಮ್ಮ ತೀರ್ಮಾನ ಕೇವಲ ಆರತಿ ವಿಚಾರಕ್ಕೆ ಮಾತ್ರ. ಉಳಿದಂತೆ ಎಲ್ಲಾ ಮಾರ್ಗಸೂಚಿಗಳು ತಿರುಪತಿ ಆಡಳಿತ ಮಂಡಳಿಯಂತೆಯೇ ಇರಲಿದೆ. ಅವರ ಮಾರ್ಗಸೂಚಿಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಡಿಕೆಶಿ ತಿಳಿಸಿದರು.
ಸಚಿವ ಸಂಪುಟ ಸಭೆ ಯಾವಾಗ, ದೆಹಲಿಗೆ ಹೋಗುವುದು ಯಾವಾಗ ಎಂಬ ಪ್ರಶ್ನೆಗೆ,ಆಗಸ್ಟ್ 6ರಿಂದ ಅಧಿವೇಶನ ಕರೆಯಲು ತೀರ್ಮಾನಿಸಲಾಗಿದೆ. ನಾನು ಒಂದು ದಿನ ಕೆಲಸದ ಮೇಲೆ ದೆಹಲಿಗೆ ಹೋಗಿ ಬರುತ್ತೇನೆ. ನಂತರ ನಮ್ಮ ನಾಯಕರು ಮೂರ್ನಾಲ್ಕು ದಿನಗಳಲ್ಲಿ ದಿನಾಂಕ ನಿಗದಿ ಮಾಡುತ್ತಾರೆ ಎಂದು ಹೇಳಿದರು.
