ಮಳವಳ್ಳಿ: ಜಮೀನುಗಳಲ್ಲಿನ ಬೆಳೆಗಳ ರಕ್ಷಣೆಗೆ ಕೆಆರ್ಎಸ್ ಜಲಾಶಯದಿಂದ ಇನ್ನು ಮೂರು ದಿನಗಳಲ್ಲಿ ನೀರು ಬಿಡುಗಡೆ ಮಾಡದಿದ್ದರೆ ಬಿಜೆಪಿಯಿಂದ ಕೆಆರ್ಎಸ್ಗೆ ಮುತ್ತಿಗೆ ಹಾಕಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದರು.
ಮಳವಳ್ಳಿ ತಾಲ್ಲೂಕಿನ ಚಿಕ್ಕಮುಲಗೂಡು ಗ್ರಾಮದಲ್ಲಿ ಜಮೀನುಗಳಲ್ಲಿ ಒಣಗುತ್ತಿರುವ ಕಬ್ಬು ಬೆಳೆಯನ್ನು ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.
ತಮಿಳುನಾಡಿಗೆ ಕದ್ದು ಮುಚ್ಚಿ ರಾಜ್ಯ ಸರ್ಕಾರ ನೀರು ಬಿಡುತ್ತಿದೆ. ಆದರೆ ನಮ್ಮಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಕೊಟ್ಟಿಲ್ಲ. ಇದರಿಂದ ರೈತರಿಗೆ ಕೋಟ್ಯಾಂತರ ರೂ. ನಷ್ಟವಾಗಿದೆ. ಇಲ್ಲಿ ಸಾಕಷ್ಟು ಎಕರೆ ಕಬ್ಬು ನೀರಿಲ್ಲದೆ ಒಣಗಿದೆ. ಸರ್ಕಾರ ಒಂದು ರೀತಿ ಕಿವುಡರಂತೆ ವರ್ತಿಸುತ್ತಿದೆ ಎಂದು ಕಿಡಿ ಕಾರಿದರು.
ಕೆಆರ್ಎಸ್ ಜಲಾಶಯದಲ್ಲಿ 86 ಅಡಿ ನೀರಿದ್ದಾಗಲೇ ನಾಲೆಗಳಿಗೆ ನೀರು ಬಿಡಲಾಗಿತ್ತು. ಆದರೆ ಈ ಸರ್ಕಾರ ಮಾತ್ರ ನಿರ್ಲಕ್ಷ್ಯ ಮಾಡುತ್ತಿದೆ. ಒಣಗುತ್ತಿರುವ ಬೆಳೆಗಳಿಗೆ ತಕ್ಷಣವೇ ನೀರು ಬಿಡಬೇಕು. ಸರ್ಕಾರಕ್ಕೆ ಮೂರು ದಿನಗಳ ಕಾಲಾವಕಾಶ ಕೊಡುತ್ತೇವೆ. ನೀರು ಬಿಡುಗಡೆ ಮಾಡದಿದ್ದರೆ ಬಿಜೆಪಿಯಿಂದ ಕೆಆರ್ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕಿ ನಾವೇ ನೀರು ಬಿಡುತ್ತೇವೆ ಎಂದು ಕಠಿಣವಾಗಿ ಹೇಳಿದರು.
ಮೇಕೆದಾಟು ಯೋಜನೆ ಮಾಡುತ್ತೇವೆ ಎನ್ನುತ್ತಾರೆ. ಆದರೆ ತಮಿಳುನಾಡು ಸರ್ಕಾರ ಮೇಕೆದಾಟಿಗೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಮಾಡುತ್ತಿದೆ. ಅಲ್ಲದೇ ನೀರು ಬಿಡಲು ಕ್ಯಾತೆ ತೆಗೆಯುತ್ತಿದೆ. ಕರ್ನಾಟಕ ಸರ್ಕಾರ ಬದುಕಿದ್ದರೆ ಒಂದು ನಿಲುವು ತೆಗೆದುಕೊಳ್ಳಬೇಕು. ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿದೆ. ತಮಗೆ ಬೇಕಾದಾಗ ವಿಶೇಷ ಅಧಿವೇಶನ ಕರೆಯುವ ಇವರು ಮೇಕೆದಾಟಿಗೆ ಹಾಗೂ ನೀರು ಬಿಡದಂತೆ ನಿರ್ಣಯ ಮಾಡಲು ಏಕೆ ಅಧಿವೇಶನ ಕರೆಯುವುದಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ಜಲಾಶಯ ತುಂಬಿಲ್ಲ ಎಂದರೆ ಕುಡಿಯುವ ನೀರಿಗೆ ಏನು ಮಾಡಬೇಕು. ತಮಿಳುನಾಡಿನವರು ಕೋರ್ಟ್ಗೆ ಹೋಗುತ್ತಾರೆ. ನ್ಯಾಯಾಲಯದಲ್ಲಿ ಅದನ್ನು ಎದುರಿಸುವ ನಿಟ್ಟಿನಲ್ಲಿ ಚರ್ಚಿಸಲು ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು. ಎಲ್ಲೆಡೆ ಬೆಳೆ ಒಣಗುತ್ತಿದೆ. ಕೂಡಲೇ ಬರ ಪರಿಸ್ಥಿತಿ ಘೋಷಣೆ ಮಾಡಬೇಕು ಎಂದು ಅಶೋಕ ಒತ್ತಾಯಿಸಿದರು.
ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವರದಿ ಕೊಟ್ಟು, ಬರ ಎಂದು ಘೋಷಣೆ ಮಾಡಿ, ನಂತರ ಕೇಂದ್ರದಿಂದ ಪರಿಹಾರ ಕೇಳಬೇಕು. ಅದನ್ನು ಬಿಟ್ಟು ಕೇಂದ್ರದ ಕಡೆ ಬೆಟ್ಟು ಮಾಡುತ್ತಾರೆ. 10 ಸಾವಿರ ಕೋಟಿಯನ್ನು ಯಾವ ಆಧಾರದ ಮೇಲೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಪ್ರಶ್ನಿಸಿದರು.
ವಿಪಕ್ಷವನ್ನು ಬಿಟ್ಟು ನೀರಾವರಿ ಸಭೆ ನಡೆಸಬಾರದು. ಎಲ್ಲರಿಗೂ ಆಹ್ವಾನ ನೀಡಬೇಕು. ತಮ್ಮ ಶಾಸಕರನ್ನು ಕರೆದು ಸಭೆ ಮಾಡಬಾರದು ಎಂದು ಸಲಹೆ ನೀಡಿದರು.
ಸರ್ಕಾರ ಮಂತ್ರಿ ಮಂಡಲ ವಿಸ್ತರಣೆಗಾಗಿ ಕಸರತ್ತು ನಡೆಸುತ್ತಿದೆ. ಮಂತ್ರಿ ಸ್ಥಾನಕ್ಕಾಗಿ ಒಬ್ಬೊಬ್ಬರಿಗೆ 100 ರಿಂದ 150 ಕೋಟಿ ಫಿಕ್ಸ್ ಮಾಡಿದೆ ಎಂದು ಅಶೋಕ ಗಂಭೀರ ಆರೋಪ ಮಾಡಿದರು.
ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ಆದರೆ ಶ್ರೀರಂಗಪಟ್ಟಣದಿಂದ ಹಿಡಿದು ಮಳವಳ್ಳಿವರೆಗಿನವರು ಮಂತ್ರಿಗಿರಿಗಾಗಿ ಓಡಾಡುತ್ತಿದ್ದಾರೆ. ಈ ಶಾಸಕರಿಗೆ ಜನರ ಬದುಕು ಬೇಕಿಲ್ಲ, ಸಮಸ್ಯೆ ಕೇಳಲು ಸಮಯವಿಲ್ಲ ಎಂದು ಶಾಸಕರ ವಿರುದ್ಧ ಕಿಡಿಕಾರಿದರು.
ಇದೇ ವೇಳೆ ಪ್ರತಿಪಕ್ಷ ನಾಯಕರು ತಹಶೀಲ್ದಾರ್ ಎಸ್.ವಿ. ಲೋಕೇಶ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಾಂತರಾಜು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಬಿ. ಸಂದೀಪ್ ಅವರಿಂದ ಬೆಳೆ ನಷ್ಟದ ಮಾಹಿತಿ ಪಡೆದುಕೊಂಡರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ. ಇಂದ್ರೇಶ್, ತಾ.ಅಧ್ಯಕ್ಷ ಮಧು ಗಂಗಾಧರ್,
ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಸಿದ್ದರಾಮಯ್ಯ, ಎಚ್.ಎಸ್. ಅಶೋಕ್ ಕುಮಾರ್, ಅಶೋಕ್ ಜಯರಾಮು, ಎಸ್.ಪಿ. ಸ್ವಾಮಿ, ಎಂ.ಎನ್. ಕೃಷ್ಣ, ಹೋನಗನಹಳ್ಳಿ ಶಿವಲಿಂಗಸ್ವಾಮಿ, ನಾಗೇಗೌಡ, ವೇಣು, ಕಾಂತರಾಜ್,
ಒಕ್ಕರಹಳ್ಳಿ ಬಸವರಾಜ್ ಹಾಜರಿದ್ದರು.
