(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಇಂದಿನಿಂದ ಐದು ದಿನಗಳ ಕಾಲ ನಡೆಯುವ ತಾಲ್ಲೂಕಿನ ಸುಪ್ರಸಿದ್ಧ ಚಿಕ್ಕಲೂರು ಶ್ರೀ ಸಿದ್ದಪ್ಪಾಜಿ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಪವಾಡ ಪುರುಷನ ಕ್ಷೇತ್ರಕ್ಕೆ ಜನಸಾಗರವೇ ಹರಿದು ಬರುತ್ತಿದೆ.
ಹೊಸ ವರ್ಷದ ಹಾಸು ಪಾಸಿನಲ್ಲಿ ಮಾಘ ಮಾಸದ ಹಾಲ ಹುಣ್ಣಿಮೆಯಂದು ಆರಂಭವಾಗುವ ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಜಾತ್ರೆ ಅಪಾರ ಸಂಖ್ಯೆ ಜನ ಸೇರುವ ಕರ್ನಾಟಕದ ಜನಪದ ಜಾತ್ರೆಗಳಲ್ಲಿ ಒಂದು. ಪ್ರತಿ ವರ್ಷ ಮಾಘ ಹುಣ್ಣಿಮೆಯಂದು ನಡೆಯುವ ಚಂದ್ರಮಂಡಲೋತ್ಸವವನ್ನು ಚಂದ್ರನಿಗೆ ಅನ್ವರ್ಥ ನಾಮವಾಗಿ ಬಳಸಲಾಗುತ್ತದೆ.
ಸುಗ್ಗಿ ಮುಗಿದು ಚುಮು ಚುಮು ಚಳಿ ಹೊರಡುವ ಹೊತ್ತಿಗೆ ಹೊಸ ವರ್ಷದ ಮೊದಲ ಹುಣ್ಣಿಮೆಯಿಂದ ಐದುರಾತ್ರಿ, ಐದು ಹಗಲು ಚಿಕ್ಕಲ್ಲೂರು ಜಾತ್ರೆ ನಡೆಯುತ್ತದೆ. ಇದೊಂದು ಸಾಹಿತ್ಯದ, ಸಂಗೀತದ, ಸಂಸ್ಕೃತಿಯ, ಆಧ್ಯಾತ್ಮದ ಜಾತ್ರೆ.
ಜಾತ್ಯಾತೀತತೆ, ಸೌಹಾರ್ದದತೆ, ಸಹಬಾಳ್ವೆ, ಸಹಪಂಕ್ತಿ ಬೋಜನದ ಆಚರಣೆಗಳ ಮೂಲಕ ಸಾಮಾಜಿಕ ಸಮಾನತೆ ಸಾಧಿಸುವುದು ಮಂಟೇಸ್ವಾಮಿ ನೀಲಗಾರರ ಪರಂಪರೆಯ ಆಶಯ. ಶರಣರ ವಚನ ಚಳುವಳಿಯ ನಂತರ ಅಲ್ಲಮ ಬಸವಾದಿ ಶರಣರ ತತ್ವ ವಿಚಾರಗಳನ್ನು 13-14 ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಸಾಕ್ಷಾತ್ಕಾರಗೊಳಿಸಿದವರು ಮಂಟೇಸ್ವಾಮಿ ಹಾಗೂ ಅವರ ಶಿಷ್ಯರಾದ ರಾಚಪ್ಪಾಜಿ, ಸಿದ್ದಪ್ಪಾಜಿರವರು. ಇಂತಹ ಉದಾತ್ತ ಮಹತ್ವದ ಆಶಯಗಳ ಅನುಷ್ಠಾನದ ಜಾತ್ರೆ ಚಿಕ್ಕಲ್ಲೂರು ಜಾತ್ರೆಯಾಗಿದೆ. ಮಂಟೇಸ್ವಾಮಿ ನೆಚ್ಚಿನ ಶಿಷ್ಯ ಸಿದ್ದಪ್ಪಾಜಿ ಹೆಸರಲ್ಲಿ ನಡೆಯುವ ನೀಲಗಾರರ ಪರಂಪರೆಯ ಈ ಜಾತ್ರೆಯ ಕೇಂದ್ರ ಬಿಂದು ಚಂದ್ರ ಮಂಡಲೋತ್ಸವ ಲಕ್ಷಾಂತರ ಜನ ಭಕ್ತ ಸಾಗರದ ನಡುವೆ ಅದ್ದೂರಿಯಾಗಿ ಜರುಗುವ ಮೂಲಕ 5 ದಿನಗಳ ಐತಿಹಾಸಿಕ ಜಾತ್ರೆಗೆ ರಾತ್ರಿ 10.45 ಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ.
ಶ್ರೀ ಕ್ಷೇತ್ರದ ಅದಿದೇವ ಪವಾಡ ಪುರುಷ ಶ್ರೀಸಿದ್ದಪ್ಪಾಜಿ ದೇವಾಲಯದ ಮುಂಭಾಗವಿರುವ ಚಂದ್ರಮಂಡಲ ಕಟ್ಟೆಯಲ್ಲಿ ಸಿದ್ದ ಪಡಿಸಿದ್ದ ಬಿದಿರಿನಾಕೃತಿಯ ಚಂದ್ರಮಂಡಲಕ್ಕೆ ಬಸವ, ಕಂಡಾಯಗಳು, ಸತ್ತಿಗೆ, ಸುರೆಪಾನಿ’ ಜಾಗಟೆ, ತಮಟೆ, ನಗಾರಿ ಮಂಗಳ ವಾದ್ಯಗಳ ಇಮ್ಮೆಳ ಹಾಗೂ ನೀಲಗಾರರ ಸಾಂಪ್ರದಾಯಿಕ ವಿಧಿ ವಿಧಾನಗಳೊಡನೆ ಜಾತ್ರೆಯ ಕೇಂದ್ರ ಬಿಂದು ಚಂದ್ರ ಮಂಡಲೋತ್ಸವಕ್ಕೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ರಾಜ ಬೊಪ್ಪೇಗೌಡನಪುರ ಧರೆಗೆ ದೊಡ್ಡವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಜ್ಞಾನಾನಂದ ಚನ್ನರಾಜೇ ಅರಸ್ ಸ್ವಾಮೀಜಿರವರು ಅಗ್ನಿ ಸ್ಪರ್ಶ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡುವರು.
ಶ್ರೀ ಸ್ವಾಮಿಗಳು ಚಂದ್ರ ಮಂಡಲೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನೆರೆದಿದ್ದ ಭಕ್ತರ ಉದ್ಘಾರ, ಜಯಘೋಷ ಮುಗಿಲು ಮುಟ್ಟಿತ್ತು. ಚಂದ್ರ ಮಂಡಲ ದಗ – ದಗಿಸಿ ಉರಿಯುತ್ತಿದ್ದಂತೆ ಉರಿಯುವ ಚಂದ್ರಮಂಡಲಕ್ಕೆ ಭಕ್ತರು ತಂದಿದ್ದ ದವಸ, ದಾನ್ಯ, ಧನ ಕನಕಗಳನ್ನು ಎಸೆದು ಧನ್ಯತೆ ಮೆರೆವರು. ಹರಕೆ ಹೊತ್ತವರು ಚಿನ್ನ ಬೆಳ್ಳಿ ಹಾಗೂ ನಾಣ್ಯ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಉರಿಯುತ್ತಿದ್ದ ಬೆಂಕಿಗೆ ಎಸೆದು ಹರಕೆ ತೀರಿಸುವ ಮೂಲಕ ಭಕ್ತಿಯ ಪರಕಾಷ್ಠೆ ಮೆರೆವರು. ನಂತರ ಚಂದ್ರ ಮಂಡಲ ಉರಿದು ಕೆಳಗೆ ಬೀಳುತ್ತಿದ್ದಂತೆ ಅದರ ಬೂದಿಯನ್ನು ಸಂಗ್ರಹಿಸಿಕೊಳ್ಳಲು ಹರಸಾಹಸ ಪಡುತ್ತಾರೆ.
ಕರ್ನಾಟಕದ ಈ ಜನಪದ ಜಾತ್ರೆಗೆ ರಾಜ್ಜದ ಹಾಗೂ ನೆರೆ ಹೊರೆ ರಾಜ್ಯಗಳ ವಿವಿಧ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಮಂದಿ ಸಿದ್ದಪ್ಪಾಜಿಯ ಭಕ್ತರು ಉತ್ಸುಕರಾಗಿ ಭಾಗವಹಿಸಿದ್ದರು. ರಾತ್ರಿ ನಡೆದ ಐತಿಹಾಸಿಕ ಚಂದ್ರ ಮಂಡಲೋತ್ಸವಕ್ಕೆ ಗಣನೀಯವಾಗಿ ಭಕ್ತರು ಆಗಮಿಸಲಿದ್ದು ಲಕ್ಷಾಂತರ ಭಕ್ತರಿಂದ ತುಂಬಿ ತುಳುಕುವ ಚಿಕ್ಕಲ್ಲೂರು ಜಾತ್ರೆ ಸುತ್ತಮುತ್ತಲ ಗ್ರಾಮಗಳ ಜನತೆ ಸಾಕ್ಷಿಯಾಗಲಿದ್ದು ಇದರಿಂದ ಜಾತ್ರೆ ಕಳೆಗಟ್ಟಲಿದೆ
ಚಂದ್ರಮಂಡಲೋತ್ಸವದಲ್ಲಿ ಹನೂರು ಶಾಸಕ ಎಂ.ಆರ್. ಮಂಜುನಾಥ್, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಭಾಗವಹಿಸಲಿದ್ದಾರೆ
ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ತಹಶೀಲ್ದಾರ್ ಬಸವರಾಜು, ಕೊಳ್ಳೇಗಾಲ ಡಿ.ವೈ.ಎಸ್.ಪಿ ಧಮೇಂದ್ರ, ಸಿ.ಪಿ.ಐ ಶಿವಮಾದಯ್ಯ, ಪಿ.ಎಸ್.ಐ ಗಳಾದ ಸುಪ್ರೀತ್, ಚೆಲುವರಾಜು, ಪಾಳ್ಯ ರಾಜಸ್ವನಿರೀಕ್ಷಕ ರಂಗಸ್ವಾಮಿ, ಹಾಗೂ ದೇವಸ್ಥಾನದ ಅರ್ಚಕರಾದ ಶಿವಮೂರ್ತಿ, ಕುಮಾರಸ್ವಾಮಿ ಸಿಬ್ಬಂದಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಸಿದ್ದತಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಚಂದ್ರ ಮಂಡಲೋತ್ಸವಕ್ಕೆ ಕೊಳ್ಳೇಗಾಲ ಡಿವೈಎಸ್ಪಿ ಧಮೇಂದ್ರ ಮಾರ್ಗದರ್ಶನದಲ್ಲಿ 150 ಕ್ಕೂ ಹೆಚ್ಚು ಪೊಲೀಸರನ್ನು ನೇಮಿಸಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದಾರೆ.
ದಿನಗಳ ಕಾಲ ನಡೆಯಲಿರುವ ಜಾತ್ರೆಯಲ್ಲಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತ ಪೂರಕ ವ್ಯವಸ್ಥೆ ಕಲ್ಪಸಲು ಮುಂದಾಗಿದೆ. ಈಗಾಗಲೇ ಜಿಲ್ಲಾಡಳಿತ ಹನೂರು ಶಾಸಕ ಎಂ.ಆರ್.ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ಜಾತ್ರಾ ಸಂಬಂಧ ಪೂರ್ವಭಾವಿ ಸಭೆ ನಡೆಸಿದ್ದು ಚಿಕ್ಕಲ್ಲೂರಿನಲ್ಲಿ ತಲಾತಲಾಂತರದಿಂದಲೂ ಪಂಕ್ತಿ ಸೇವೆ ನಡೆದು ಕೊಂಡು ಬಂದಿದೆ.
ಚಿಕ್ಕಲ್ಲೂರಿನಲ್ಲಿ ಬಲಿ ಪೀಠವಿಲ್ಲ. ಜಾತ್ರೆಯ ನಾಲ್ಕನೆಯ ದಿನ ನಡೆಯುವ ಪಂಕ್ತಿ ಸೇವೆ ಆಚರಣೆಗೆ ಭಕ್ತರಿಗೆ ತೊಂದರೆ ಆಗದಂತೆ ಅವಕಾಶ ಕಲ್ಪಿಸ ಬೇಕೆಂದು, ಅಂದು ಶ್ರೀ ಸಿದ್ದಪ್ಪಾಜಿ ಒಕ್ಕಲಿನವರು ದೇವಸ್ಥಾನದಾಚೆ ದೂರದಲ್ಲಿ ಯಾವುದೇ ಜಾತಿ ಬೇಧವಿಲ್ಲದೆ ಎಲ್ಲರೂ ಒಗ್ಗೂಡಿ ಪಂಕ್ತಿಸೇವೆ ಮಾಡಿ ಸಂತೋಷದಿಂದ ತಮ್ಮ ಊರುಗಳಿಗೆ ತೆರಳುತ್ತಾರೆ. ಈ ಪಂಕ್ತಿ ಸೇವೆ ದಿನ ಸಾರ್ವಜನಿಕರಿಗೆ ತೊಂದರೆ ನೀಡಬೇಡಿ, ಚೆಕ್ಪೋಸ್ಟ್ ನಿರ್ಮಿಸಿ ಅಲ್ಲಿ ಪ್ರಾಣಿಗಳನ್ನು ತಪಾಸಣೆ ಮಾಡುವುದು ಬೇಡ, ಸಾರ್ವಜನಿಕರು ಜಾತ್ರೆ ನಡೆಸಲು ಅವಕಾಶ ಕಲ್ಪಿಸಿ ಎಂದು ಶಾಸಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ನೂತನ ಜಿಲ್ಲಾಧಿಕಾರಿ ಶ್ರೀ ರೂಪ ಅವರು 5 ದಿನಗಳು ನಡೆಯುವ ಚಿಕ್ಕಲ್ಲೂರು ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಮೂಲಭೂತ ಸೌಕರ್ಯವನ್ನು ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ವಹಿಸಿ ಮಾಡಬೇಕು. ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕೆಂದು ಸೂಚಿಸಿದ್ದು. ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕೆ ಸ್ವಚ್ಚತೆ, ಮೂಲಭೂತ ಸೌಕರ್ಯವಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದ್ದು ಕಬಿನಿ ನಾಲೆಯಿಂದ ನೀರು ಹರಿಸಲು ಕ್ರಮವಹಿಸಿದೆ ಇದರಿಂದ ದೇವಾಲಯದ ಸಮೀಪವಿರುವ 2 ಚಕ್ ಡ್ಯಾಂಗಳು ತುಂಬಿವೆ.
ಭಕ್ತರ ಸುಗಮ ಸಂಚಾರಕ್ಕೆ ರಸ್ತೆ ಸಾರಿಗೆ ವಿಭಾಗಿಯ ನಿಯಂತ್ರಣಾಧಿಕಾರಿ ಅಶೋಕ್ರವರು 179 ಕೆ.ಎಸ್.ಆರ್.ಟಿ.ಸಿ ಗಳನ್ನು ನಿಯೋಜಿಸಿದ್ದಾರೆ. ಇದಲ್ಲದೆ ಖಾಸಗಿ ಬಸ್ ಗಳನ್ನು ಸಹ ಓಡಿಸಲಾಗುತ್ತಿದೆ. ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು 2 ಆಂಬುಲೆನ್ಸ್ 24 ಗಂಟೆ ಕೆಲಸ ಮಾಡಲಿದೆ.
ಸ್ಥಳದಲ್ಲೆ ಅಗ್ನಿಶಾಮಕ ವಾಹನ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ನಿರಂತರ ವಿದ್ಯುತ್ ಹರಿಸಲು ಕ್ರಮವಹಿಸಲಾಗಿದೆ. ಹಾಗೂ ನ್ಯಾಯಾಲಯದ ಆದೇಶದಂತೆ ಪ್ರಾಣಿ ಬಲಿ ಮಾಡಲು ಅವಕಾಶ ನೀಡುವುದಿಲ್ಲ. ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು, ಪ್ರಾಣ ಬಲಿ ತಡೆಯುವ ಉದ್ದೇಶದಿಂದ 3 ಪಾಳಿಯಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
5 ದಿನಗಳ ಕಾಲ ನಡೆಯುವ ಜಾತ್ರೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರು ಜಾತ್ರೆಗೆ ಬಂದು ಹೋಗುವ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಮುಂಜಾಗ್ರತ ಕ್ರಮ ವಹಿಸಿದ್ದು ನೂತನ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಮುತ್ತುರಾಜು ರವರು 3 ಡಿ.ವೈ.ಎಸ್.ಪಿ, 8 ವೃತ್ತ ನಿರೀಕ್ಷಕರು, 33 ಪಿಎಸ್.ಐ, 57 ಎ.ಎಸ್.ಐ, 364 ಪೇದೆ ಹಾಗೂ ಮುಖ್ಯ ಪೇದೆಗಳು 21 ಮಹಿಳಾ ಪೇದೆಗಳು, 200 ಗೃಹರಕ್ಷಕ ಸಿಬ್ಬಂದಿ 5 ಡಿ.ಎ.ಆರ್ ತುಕಡಿ, 2 ಕೆ.ಎಸ್.ಆರ್.ಪಿ ತುಕಡಿ ಸೇರಿದಂತೆ ಸುಮಾರು 800 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ.
ಜಾತ್ರೆಗೆ ಹನೂರು ಮತ್ತು ಕೊಳ್ಳೇಗಾಲ ಕಡೆಯಿಂದ ಬರುವವರಿಗೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಾತ್ರೆ ಆವರಣದಲ್ಲಿ ಸಿಸಿ ಕ್ಯಾಮರ ಅಳವಡಿಸಿ ನಿಗಾವಹಿಸಲಾಗಿದೆ.
ಶನಿವಾರ ರಾತ್ರಿ (ಜ.3. ರಂದು) ಚಂದ್ರಮಂಡಲೋತ್ಸವದೊಡನೆ ಪ್ರಾರಂಭವಾಗಿರುವ ಈ ಸುಪ್ರಸಿದ್ಧ ಜನಪದ ಜಾತ್ರೆ ಇದೇ ಜ.7 ರ ವರೆಗೆ 5 ದಿನಗಳ ಕಾಲ ಜಾತ್ರೆ ನಡೆಯಲಿದ್ದು ರಾತ್ರಿ ಜರುಗಿದ ಚಂದ್ರ ಮಂಡಲೋತ್ಸವದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಲಿದ್ದು, ಜಾತ್ರೆಯ 2.ನೇ ದಿನವಾದ ಭಾನುವಾರ (4. ರಂದು) ಹುಲಿವಾಹನೋತ್ಸವ ನಡೆಯಲಿದೆ,
(5. ರಂದು) ರುದ್ರಾಕ್ಷಿ ಮಂಟಪೋತ್ಸವ (ಮುಡಿ ಸೇವೆ), 6. ರಂದು ಗಜವಾಹನೋತ್ಸವ (ಪಂಕ್ತಿಸೇವೆ), 7. ರಂದು ಮುತ್ತುರಾಯರ ಸೇವೆ ನಡೆಯಲಿವೆ. ಇಂದು ಜ. 3 ರಂದು ರಾತ್ರಿ ಚಂದ್ರಮಂಡಲೋತ್ಸವದೊಡನೆ ಪ್ರಾರಂಭವಾಗುವ ಜಾತ್ರೆಗೆ ಜ. 7 ರಂದು ಕಡೆ ಬಾಗಿಲು ಸೇವೆಯೊಡನೆ ತೆರೆ ಬೀಳಲಿದೆ.
