ಮಳವಳ್ಳಿ: ನಿಂತಿದ್ದ ಕಾರಿನ ಗ್ಲಾಸ್ ಒಡೆದು ಚಿನ್ನಾಭರಣಗಳಿದ್ದ ಬ್ಯಾಗ್ ಕಳವು ಮಾಡಿರುವ ಘಟನೆ ಮಳವಳ್ಳಿ ಪಟ್ಟಣದ ಹೊರವಲಯದ ಶ್ರೀ ಕನ್ವೆನ್ಷನ್ ಹಾಲ್ ಬಳಿ ಶನಿವಾರ ರಾತ್ರಿ ನಡೆದಿದೆ.
ಕನಕಪುರದ ನಿವಾಸಿ ಸಿದ್ದೇಗೌಡ ಅವರು ಚಿನ್ನಾಭರಣ ಕಳೆದುಕೊಂಡವರು.
ಬಸವಪುರದ ಸಂಬಂಧಿಕರೊಬ್ಬರ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಬಂದಿದ್ದ ಅವರು, ಕಾರನ್ನು ಹೊರಾಂಗಣದಲ್ಲಿ ನಿಲ್ಲಿಸಿ ಕಾರ್ಯಕ್ರಮಕ್ಕೆ ತೆರಳಿದ್ದರು.
ರಾತ್ರಿ 9.30ರ ಸುಮಾರಿಗೆ ವಾಪಸ್ ಬಂದು ನೋಡಿದಾಗ ಕಾರಿನ ಗ್ಲಾಸ್ ಒಡೆದಿದ್ದು, ಮುಂಭಾಗದ ಸೀಟ್ ಮೇಲೆ ಇಟ್ಟಿದ್ದ ಸುಮಾರು 76 ಗ್ರಾಂ ತೂಕದ ಚಿನ್ನಾಭರಣಗಳಿದ್ದ ಬ್ಯಾಗ್ ಕಳವಾಗಿರುವುದು ಗೊತ್ತಾಗಿದೆ.
ಬ್ಯಾಗ್ನಲ್ಲಿ ಕತ್ತಿನ ಸರ, ಜುಮುಕಿ, ಓಲೆ ಮತ್ತಿತರ ಒಡವೆಗಳಿದ್ದವು ಎಂದು ಸಿದ್ದೇಗೌಡ ಅವರು ತಿಳಿಸಿದ್ದಾರೆ.
ಕಳವಾದ ಒಡವೆಗಳ ಮೌಲ್ಯ ಸುಮಾರು 13 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಸಿದ್ದೇಗೌಡ ಅವರು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
