ಉಧಂಪುರ: ಸೋಮವಾರ ಬೆಳ್ಳಂ ಬೆಳಿಗ್ಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 15 ಮಂದಿ ಮೃತಪಟ್ಟ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ನಡೆದಿದೆ.
ರಾಮ ನಗರ ಕಡೆಯಿಂದ ಹೊರಟಿದ್ದ ಬಸ್ ಕಾಗೋರ್ಟ್ ಗ್ರಾಮದ ಬಳಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಕಡಿದಾದ ತಿರುವಿನಲ್ಲಿ ಬಸ್ ಉರುಳಿ ಬಿದ್ದು ನಜ್ಜುಗುಜ್ಜಾಗಿದೆ.
ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಪೊಲೀಸರಿಗೆ ಕೈಜೋಡಿಸಿದರು.
ಗಾಯಾಳುಗಳನ್ನು ಅವಶೇಷಗಳಿಂದ ಹೊರತೆಗೆದಿದ್ದಾರೆ.
ಬಸ್ ಅವಶೇಷಗಳಿಂದ ಒಟ್ಟು 15 ಶವಗಳನ್ನು ಹೊರತೆಗೆಯಲಾಗಿದ್ದು, 20 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ನಂತರ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಉಧಮ್ಪುರದ ಉಪ ಆಯುಕ್ತ ಮಿಂಗಾ ಶೆರ್ಪಾ ಅವರೊಂದಿಗೆ ಮಾತನಾಡಿದ್ದು, ಗಂಭೀರವಾಗಿ ಗಾಯಗೊಂಡಿರುವವರ ಚಿಕಿತ್ಸೆಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.
