ಬೆಂಗಳೂರು: ಬಿಡದಿಯಲ್ಲಿ ತಮ್ಮ ಪರಂಪರಾಗತ ಆಸ್ತಿ ಉಳಿಸಿಕೊಳ್ಳಲು ಶಾಂತಿಯುತ ಹೋರಾಟ ನಡೆಸುತ್ತಿರುವ ರೈತರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿರುವುದು ರಾಜ್ಯ ಸರ್ಕಾರದ ದಬ್ಬಾಳಿಕೆಯ ಪರಮಾವಧಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ, ಅವರ ಧ್ವನಿಯನ್ನು ಆಲಿಸಿ ಸಮಸ್ಯೆ ಬಗೆಹರಿಸಬೇಕಾದ ಸರ್ಕಾರ, ಬದಲಾಗಿ ಕೊಲೆ ಯತ್ನದಂತಹ ಗಂಭೀರ ಪ್ರಕರಣಗಳನ್ನು ದಾಖಲಿಸುವ ಮೂಲಕ ಪ್ರಜಾಪ್ರಭುತ್ವದ ಕಂಠಹರಣ ಮಾಡುತ್ತಿದೆ. ಇದು ಸ್ವತಂತ್ರ ಭಾರತದಲ್ಲಿ ಅಕ್ಷಮ್ಯ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಭೂ ಮಾಫಿಯಾ ವ್ಯವಸ್ಥೆಯು, ಬಡ ಮತ್ತು ಮಧ್ಯಮ ವರ್ಗದ ರೈತರನ್ನು ಬೆದರಿಸಿ ಅವರ ಜಮೀನು ಕಬಳಿಸುವ ಪ್ರಯತ್ನ ನಡೆಸುತ್ತಿದೆ ಎಂಬ ಅನುಮಾನವನ್ನು ಈ ಬೆಳವಣಿಗೆ ಮತ್ತಷ್ಟು ಬಲಪಡಿಸಿದೆ ಎಂದು ಚಂದ್ರು ತಿಳಿಸಿದ್ದಾರೆ.
ಜನರ ಸೇವೆಗಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇಂದು ಜನರನ್ನೇ ಅಪರಾಧಿಗಳಂತೆ ಕಾಣುತ್ತಿರುವುದು ದುರಂತ.
ರೈತರ ಮೇಲೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳನ್ನು ಬಳಸಿಕೊಂಡು ಪ್ರಕರಣ ದಾಖಲಿಸಿರುವುದು, ಹೋರಾಟಗಾರರನ್ನು ಬೆದರಿಸಿ ಹೋರಾಟವನ್ನು ಹತ್ತಿಕ್ಕುವ ದುರುದ್ದೇಶದ ಭಾಗವಾಗಿದೆ.
ಮುಖ್ಯಮಂತ್ರಿಗಳು ತಕ್ಷಣ ಮಧ್ಯಪ್ರವೇಶಿಸಿ, ರೈತರ ಮೇಲೆ ದಾಖಲಿಸಿರುವ ಎಲ್ಲಾ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು. ಅಲ್ಲದೆ, ಬಿಡದಿ ರೈತರೊಂದಿಗೆ ನೇರ ಮಾತುಕತೆ ನಡೆಸಿ, ಅವರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ, ಆಮ್ ಆದ್ಮಿ ಪಕ್ಷ ರಾಜ್ಯಾದ್ಯಂತ ರೈತರ ಪರವಾಗಿ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು
ಡಾ. ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದ್ದಾರೆ.
ರೈತರ ಧ್ವನಿಯನ್ನು ಪೊಲೀಸ್ ಬಲದಿಂದ ಹತ್ತಿಕ್ಕಲು ಸಾಧ್ಯವಿಲ್ಲ. ಭೂಮಿ ಉಳಿಸಿಕೊಳ್ಳಲು ಹೋರಾಡುತ್ತಿರುವ ರೈತರ ಜೊತೆಗೆ ಕರ್ನಾಟಕದ ಜನತೆ ನಿಂತಿದ್ದಾರೆ ಮತ್ತು ಆಮ್ ಆದ್ಮಿ ಪಕ್ಷ ಕೊನೆಯವರೆಗೂ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಲಿದೆ ಎಂದು ತಿಳಿಸಿದ್ದಾರೆ.
