ನಂಜನಗೂಡು: ನಂಜನಗೂಡು ತಾಲೂಕು, ಗೋಳೂರು ಗ್ರಾಮದಲ್ಲಿ ನಿನ್ನೆ ಅಮಾವಾಸ್ಯೆ ದಿನ ಮಾನವನ ಬುರುಡೆಯನ್ನು ಇಟ್ಟು ವಾಮಾಚಾರ ಮಾಡಿದ್ದು, ಗ್ರಾಮದಲ್ಲಿ ಆತಂಕ ಮನೆಮಾಡಿದೆ.
ಗ್ರಾಮದ ಸ್ಮಶಾನದಿಂದ ಮಾನವನ ಬುರುಡೆ ಮತ್ತು ಮೂಳೆಗಳನ್ನು ತಂದು ಅವುಗಳನ್ನು ಇರಿಸಿ ವಾಮಾಚಾರ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ, ಸ್ಥಳದಲ್ಲಿ ಅರಿಸಿನ, ಕುಂಕುಮ, ನಿಂಬೆ ಹಣ್ಣುಗಳನ್ನು ಇಟ್ಟು ಪೂಜೆ ಮಾಡಿರುವ ಕುರುಹುಗಳು ಕಂಡುಬಂದಿವೆ.
ನಿನ್ನೆ ಅಮಾವಾಸ್ಯೆ ಇದ್ದ ಹಿನ್ನೆಲೆಯಲ್ಲಿ ವಾಮಾಚಾರ ನಡೆದಿರಬಹುದು ಎಂದು ಗ್ರಾಮಸ್ಥರು ದೂರಿದ್ದಾರೆ. ಬೇರೆ ಊರಿನಿಂದ ಬಂದ ಕೆಲವರು ರಾತ್ರಿ ವೇಳೆ ಗ್ರಾಮಕ್ಕೆ ಬಂದು ಈ ಕೃತ್ಯ ಎಸಗಿರಬಹುದು ಎಂದು ಜನ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
