ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಅಟ್ಟಹಾಸ ಮುಂದುವರೆದಿದೆ,
ಇದೀಗ ವಿಧವೆ ಮೇಲೆ ಗ್ಯಾಂಗ್ ರೇಪ್ ಮಾಡಿ ಆಕೆಯ ಕೂದಲನ್ನು ಕತ್ತರಿಸಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ.
ಬಾಂಗ್ಲಾದೇಶದ ಜೆನೈದಾ ಜಿಲ್ಲೆಯ ಕಲಿಗಂಜ್ ಉಪ-ಜಿಲ್ಲೆಯಲ್ಲಿ 40 ವರ್ಷದ ಹಿಂದೂ ವಿಧವೆ ಮೇಲೆ ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ಎಸಗಿ, ಆಕೆಯ ಕೂದಲನ್ನು ಕತ್ತರಿಸಿ, ಮರಕ್ಕೆ ಕಟ್ಟಿಹಾಕಿ ಹಣ ನೀಡುವಂತೆ ಒತ್ತಾಯಿಸಿ ಧಮ್ಕಿ ಹಾಕಿದ್ದಾರೆ.
ಈ ಘಟನೆ ದೇಶದಲ್ಲಿ ತೀವ್ರ ಕಳವಳ ಮೂಡಿಸಿದೆ, ಶರಿಯತ್ಪುರದಲ್ಲಿ ಹಿಂದೂ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿದೆ.ಇದೆಲ್ಲ ಘಟನೆಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.
ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳನ್ನು ಶಹೀನ್ ಮತ್ತು ಆತನ ಸಹೋದರ ಎಂದು ಗುರುತಿಸಲಾಗಿದೆ.
ಅತ್ಯಾಚಾರಕ್ಕೊಳಗಾದ ಮಹಿಳೆ, ಸುಮಾರು ಎರಡೂವರೆ ವರ್ಷಗಳ ಹಿಂದೆ ಆರೋಪಿ ಶಹೀನ್ ಮತ್ತು ಆತನ ಸಹೋದರನಿಂದ ಎರಡು ಅಂತಸ್ತಿನ ಮನೆಯನ್ನು 20 ಲಕ್ಷ ಟಾಕಾಗೆ (ಬಾಂಗ್ಲಾದೇಶದ ಕರೆನ್ಸಿ) ಖರೀದಿಸಿದ್ದರಂತೆ.
ಇನ್ನು ಮನೆ ಕೊಂಡು ಅದರಲ್ಲಿ ಜೀವನ ನಡೆಸುತ್ತಿದ್ದ ಆ ವಿಧವೆಯನ್ನು ಮಾತನಾಡಿಸಲು ಆರೋಪಿ ಶಹೀನ್ ಆಗಾಗ ಬರುತ್ತಿದ್ದ, ಈ ವೇಳೆ ಆಕೆಗೆ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಮಹಿಳೆ ನಿರಾಕರಿಸಿದಾಗ, ಶಹೀನ್ ಮತ್ತು ಆತನ ಸಹೋದರ ಹಸನ್, ವಿಧವೆ ವಾಸವಿದ್ದ ಮನೆಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಅವರಿಂದ 50,000 ಟಾಕಾ (ಸುಮಾರು 37,000 ರೂ.) ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಮಹಿಳೆ ಕಿರುಚಲು ಪ್ರಾರಂಭಿಸಿದಾಗ, ಆಕೆಯನ್ನು ಮರಕ್ಕೆ ಕಟ್ಟಿಹಾಕಿ, ಆಕೆಯ ಕೂದಲನ್ನು ಕತ್ತರಿಸಿ, ಆ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆದಿದ್ದಾರೆ.
ಪಾಪಿಗಳು ಮಹಿಳೆಗೆ ಚಿತ್ರಹಿಂಸೆ ನೀಡಿದ್ದರಿಂದ ಆಕೆ ಅರೆ ಪ್ರಜ್ಞಾವಸ್ಥೆಗೆ ತಲುಪಿದ್ದು, ಸ್ಥಳೀಯರು ಆಕೆಯನ್ನು ಜೆನೈದಾ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯ ಅಧೀಕ್ಷಕ ಡಾ. ಎಂ.ಡಿ. ಮುಸ್ತಫಿಝುರ್ ರಹಮಾನ್ ಅವರು ವಿಚಾರಿಸಿದಾಗ ಮಹಿಳೆ ಏನು ನಡೆದಿದೆ ಎಂದು ವೈದ್ಯರಿಗೆ ಹೇಳಿರಲಿಲ್ಲ. ಆದರೆ ವೈದ್ಯಕೀಯ ಪರೀಕ್ಷೆಯ ನಂತರ ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದು ಗೊತ್ತಾಗಿದೆ.
ಬಳಿಕ ಮಹಿಳೆ ಕಲಿಗಂಜ್ ಪೊಲೀಸ್ ಠಾಣೆಯಲ್ಲಿ ಶಹೀನ್ ಮತ್ತು ಹಸನ್ ವಿರುದ್ಧ ದೂರು ದಾಖಲಿಸಿದ್ದಾರೆ.
