ಢಾಕಾ: ಬಾಂಗ್ಲಾದೇಶದ ರಾಜ್ ಬರಿ ಜಿಲ್ಲೆಯಲ್ಲಿ ಪದ್ಮಾ ನದಿಗೆ ಬಸ್ ಉರುಳಿ ಬಿದ್ದ ಪರುಣಾಮ 23 ಮಂದಿ ಜಲ ಸಮಾಧಿಯಾಗಿದ್ದಾರೆ.
ಬುಧವಾರ ಸಂಭವಿಸಿದ ಭೀಕರ ದುರಂತದಲ್ಲಿ, 50 ಪ್ರಯಾಣಿಕರಿದ್ದ ಬಸ್ ಫೆರ್ರಿಯಲ್ಲಿ ಸಾಗುತ್ತಿದ್ದ ವೇಳೆ ಪದ್ಮಾ ನದಿಗೆ ಉರುಳಿ ಬಿದ್ದಿದೆ.
ದೌಲತ್ಡಿಯಾ ಪ್ರದೇಶದ 3ನೇ ಫೆರ್ರಿ ಟರ್ಮಿನಲ್ ಬಳಿ ಬುಧವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ಈ ಅಪಘಾತ ಸಂಭವಿಸಿದೆ.
ರಾಜ್ ಬರಿಯಿಂದ ಢಾಕಾಕ್ಕೆ ತೆರಳುತ್ತಿದ್ದ ಬಸ್ ಫೆರ್ರಿಯ ಮೇಲೆ ಸಾಗುತ್ತಿದ್ದಾಗ ಆಕಸ್ಮಿಕವಾಗಿ ನದಿಗೆ ಉರುಳಿ ಬಿದ್ದಿದೆ. ಇದರ ಪರಿಣಾಮವಾಗಿ 23 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡರೆ ಮತ್ತೆ ಕೆಲವರು ನಾಪತ್ತೆಯಾಗಿದ್ದಾರೆ.
ಬಸ್ ಸಾರಿಗೆ ದೋಣಿಯ ಮೇಲೆ ಹತ್ತುವಾಗ ಈ ಅಪಘಾತ ಸಂಭವಿಸಿದೆ. ಇದರಿಂದ ಬಸ್ನಲ್ಲಿದ್ದ ಪ್ರಯಾಣಿಕರು ನೀರಿಗೆ ಬಿದ್ದಿದ್ದಾರೆ. ತಕ್ಷಣ ಅಗ್ನಿಶಾಮಕ ದಳ ಮತ್ತು ಡೈವರ್ಗಳ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ ಹಲವರನ್ನು ರಕ್ಷಿಸಿವೆ.
ಬಸ್ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ 50 ಜನರನ್ನು ತುಂಬಿಸಿಕೊಂಡಿತ್ತು. ವಿಪರೀತ ಭಾರವಾಗಿ ಬಸ್ ಆಯತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ರಕ್ಷಣಾ ಹಡಗು ಹಮ್ಜಾ ಅಪಘಾತ ನಡೆದ 6 ಗಂಟೆಗಳ ನಂತರ ಕ್ರೇನ್ ಬಳಸಿ,ನದಿಯಿಂದ ಬಸ್ ಅನ್ನು ಹೊರತೆಗೆದಿದೆ.
ಈ ಘಟನೆಯ ಬಗ್ಗೆ ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ತನಿಖೆಗೆ ಆದೇಶಿಸಿದ್ದಾರೆ. ನದಿಗೆ ಬಿದ್ದ ಸುಮಾರು 11 ಪ್ರಯಾಣಿಕರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
