ಅಮರಾವತಿ: ಆಂಧ್ರಪ್ರದೇಶದಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ಬಸ್ ಅಪಘಾತ ಸಂಭವಿಸಿ,13 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದ ಮಾರ್ಕಪುರಂ ಬಳಿ ರಾಯವರಂ ಬಳಿ ಪ್ರಯಾಣಿಸುತ್ತಿದ್ದ ಖಾಸಗಿ ಬಸ್, ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದು ಹೊತ್ತಿ ಉರಿದಿದೆ.
ಡಿಕ್ಕಿಯ ನಂತರ, ಬಸ್ಗೆ ಬೆಂಕಿ ಹೊತ್ತಿಕೊಂಡು 10 ಜನರು ಸಜೀವ ದಹನವಾಗಿದ್ದಾರೆ.ಹಲವರು ಗಂಭೀರ ಗಾಯಗೊಂಡಿದ್ದು ಅವರಲ್ಲಿ ಮೂವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಸ್ ತೆಲಂಗಾಣದ ನಿರ್ಮಲ್ನಿಂದ ನೆಲ್ಲೂರಿಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಪಘಾತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ನೆರವು ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಅಪಘಾತದ ಕಾರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ವಿವರವಾದ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಎದುರಿನಿಂದ ಬಂದ ಟಿಪ್ಪರ್, ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಮತ್ತು ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಅವಘಡವನ್ನು ಕಡಿಮೆ ಮಾಡಲು ನಾವು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಆಂಧ್ರ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇದಲ್ಲದೆ, ಗಾಯಾಳುಗಳ ಚಿಕಿತ್ಸೆಗೆ 50,000 ರೂ.ಗಳ ಆರ್ಥಿಕ ನೆರವು ನೀಡುವುದಾಗಿ ಹೇಳಿದ್ದಾರೆ.
ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ತಿಳಿಸಿದ್ದಾರೆ.
