ಮೈಸೂರು: ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯಲ್ಲಿ ವಿಪಕ್ಷ ನಾಯಕರ ಪ್ರಶ್ನೆಗೆ ಉತ್ತರ ಕೊಡಲಾಗದೇ ಹೆದರಿ ಓಡಿಹೋದ ಪುಕ್ಕಲು ಪ್ರಧಾನಿ ಯಾರು, ಖಜಾನೆ ಖಾಲಿ ಆಗಿರೋದು ಕೇಂದ್ರ ಸರ್ಕಾರದ್ದು, ಅದನ್ನ ಮುಚ್ಚಿಟ್ಟುಕೊಳ್ಳಲು ಏನೇನೊ ಹೇಳಿಕೆಗಳನ್ನ ನೀಡುತ್ತಿದ್ದಾರೆ ಎಂದು ಬಿ. ಸುಬ್ರಹ್ಮಣ್ಯ ಕಟುವಾಗಿ ಟೀಕಿಸಿದ್ದಾರೆ.
ಸಿದ್ದರಾಮಯ್ಯ ಅವರಂಥ ಪುಕ್ಕಲು ಮುಖ್ಯಮಂತ್ರಿಗಳನ್ನ ನಾನು ಈವರೆಗೆ ನೋಡಿಲ್ಲ ಎಂಬ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹರುಕು ಬಾಯಿಯ ಪ್ರತಾಪ್ ಸಿಂಹ ಅವರ ಮಾತಿಗೆ ಮೂರು ಕಾಸಿನ ಬೆಲೆ ಇಲ್ಲ ಹಾಗಾಗಿ ಸಿದ್ದರಾಮಯ್ಯರನ್ನ ಬೈದುಕೊಂಡೇ ತಿರುಗೋದನ್ನ ಕೆಲಸ ಮಾಡಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
10 ವರ್ಷಕ್ಕೂ ಹೆಚ್ಚು ಕಾಲ ಲೋಕಸಭೆಯಲ್ಲಿದ್ದರೂ ಯಾವ ಭಾಷೆ ಯಾರ ಮೇಲೆ ಬಳಸಬೇಕು ಅನ್ನೋ ಜ್ಞಾನ ಇಲ್ಲ, ಅಧಿಕಾರದಲ್ಲಿದ್ದಾಗ ಮೋದಿ ಬಿಟ್ಟರೇ ನಾನೇ ಅನ್ನೋ ರೀತಿ ಬೀಗುತ್ತಿದ್ದರು, ಅದಕ್ಕೆ 3ನೇ ಬಾರಿಗೆ ಟಿಕೆಟ್ ಕೊಡದೇ ಕೂರಿಸಿದ್ದು,ಇದರ ಬಗ್ಗೆ ಧೈರ್ಯದಿಂದ ಪ್ರತಿಭಟಿಸದ ಪ್ರತಾಪ್ ಸಿಂಹಾನೆ ನಿಜವಾದ ಪುಕ್ಕಲು ಎಂದು ಟಾಂಗ್ ನೀಡಿದ್ದಾರೆ.
2020ರ ಚೀನಾ ಗಡಿ ಸಂಘರ್ಷ ಸಮಯದಲ್ಲಿ ನಿರ್ಣಾಯಕ ನಿರ್ಧಾರಗಳನ್ನ ತೆಗೆದುಕೊಳ್ಳಲಾಗದೇ ನಿಮ್ಮ ವಿವೇಚನೆಗೆ ಬಿಟ್ಟಿದ್ದು ಎಂದ ಪುಕ್ಕಲು ಪ್ರಧಾನಿ ಯಾರು? ಟ್ರಂಪ್ ಹೋದಲೆಲ್ಲಾ ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಅಂತಿದ್ದಾರೆ, ʻಟ್ರಂಪ್ ಸುಳ್ಳುಗಾರʼ ಎಂದು ಹೇಳದ ಪುಕ್ಕಲು ಪ್ರಧಾನಿ ಯಾರು? ಎಂದು ಸುಬ್ರಮಣ್ಯ ಪ್ರಶ್ನೆಗಳ ಮಳೆ ಸುರಿಸಿದ್ದಾರೆ.
ಭಾರತದ ಮೇಲಿನ 50% ತೆರಿಗೆ ಕಡಿಮೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಟ್ರಂಪ್ ಸುಂಕ 18% ಗೆ ಇಳಿಸಿದ್ದು ಯಾಕೆ? ಕ್ರಿಮಿನಲ್ ಜೆಫ್ರಿ ಎಪ್ಸ್ಟೀನ್ ಫೈಲ್ಸ್ನಲ್ಲಿ ಪ್ರಧಾನಿ ಮೋದಿ ಹೆಸರು ಹಾಗೂ ಟ್ರಂಪ್ ಬಗ್ಗೆಯೂ ಉಲ್ಲೇಖವಾಗಿದೆ ಅನ್ನೋ ಮಾಹಿತಿ ಇದೆ. ಇದರಿಂದ ಜನರ ಗಮನವನ್ನ ಬೇರೆಡೆಗೆ ಸೆಳೆಯಲು ಟ್ರಂಪ್ ಸುಂಕ ಇಳಿಸಿದ್ದಾರೆ ಅನ್ನೋ ಮಾಹಿತಿ ಇದೆ. ಇದಕ್ಕೆ ಧೈರ್ಯವಿದ್ದರೆ ಪ್ರಧಾನಿಗಳು ಉತ್ತರ ಕೊಡುತ್ತಾರಾ? ಪ್ರತಾಪ್ ಸಿಂಹ ಅವ್ರೇ ಈಗ ಹೇಳಿ ಪುಕ್ಕಲು ನಿಮ್ಮ ಪಕ್ಷದ ಪ್ರಧಾನಿಗಳ ಅಥವಾ ಸಿದ್ದರಾಮಯ್ಯ ಅವರಾ? ಎಂದು ಸುಬ್ರಹ್ಮಣ್ಯ ಕೇಳಿದ್ದಾರೆ.
ರಾಜ್ಯಕ್ಕೆ ನಿರಂತರವಾಗಿ ತೆರಿಗೆ ವಿಚಾರದಲ್ಲಿ ಅನ್ಯಾಯ ಆಗುತ್ತಿದ್ದರೂ ಬಿಜೆಪಿ ಸಂಸದರಿಗೆ ಅದನ್ನು ಪ್ರಶ್ನಿಸುವ ಯೋಗ್ಯತೆಯಿಲ್ಲ. 450 ರೂಪಾಯಿ ಇದ್ದ ಗ್ಯಾಸ್ ಬೆಲೆ 1000 ರೂ. ದಾಟಿದೆ, ಇದರ ಬಗ್ಗೆಯೂ ಸೊಲ್ಲೆತ್ತಲಾಗದೇ ಬಿಜೆಪಿ ರಾಜ್ಯ ಸಂಸದರು ಪುಕ್ಕಲುತನ ತೋರಿಸುತ್ತಿದ್ದಾರೆ. ಮೆಟ್ರೋ ದರ ಇಳಿಕೆ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆಯುವ ಧೈರ್ಯವೂ ಇಲ್ಲದೇ, ಮೋದಿ, ಅಮಿತ್ ಶಾ ಮಾತಿಗೆ ಬಾಲ ಮುದುರಿಕೊಂಡಿದ್ದಾರೆ ಈಗ ಹೇಳಿ ಪುಕ್ಕಲರು ಯಾರು ಅಂತ ಎಂದು ಅವರು ಕಿಡಿ ಕಾರಿದ್ದಾರೆ.
