ಮೈಸೂರು: ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯ ಖಜಾಂಚಿ ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ವೃದ್ಧಾಶ್ರಮಕ್ಕೆ
ಅಡುಗೆ ಪರಿಕರ ವಿತರಿಸಿ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಬಿ ರಾಜಶೇಖರ್ ಅವರ ಹುಟ್ಟುಹಬ್ಬವನ್ನು ಆಚರಿಸಿದರು.
ಹೂಟಗಳ್ಳಿಯ ಎನ್ಹೆಚ್ಬಿ/ಕೆಹೆಚ್ಬಿ ಕಾಲೋನಿಯಲ್ಲಿರುವ ಪಿಜಿಆರ್ಎಸ್ಎಸ್ ವೃದ್ಧಾಶ್ರಮಕ್ಕೆ ಅಡುಗೆ ಮಾಡಲು ಕುಕ್ಕರ್ಗಳು, ತವಾ, ವಿವಿಧ ರೀತಿಯ ಪಾತ್ರೆಗಳು ಸೇರಿದಂತೆ ವೃದ್ಧರಿಗೆ ಹಣ್ಣು ಹಂಪಲು ವಿತರಿಸಿ ಸೇವಾಕಾರ್ಯಗಳ ಮೂಲಕ ಬಿ.ಬಿ.ರಾಜಶೇಖರ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಪಿಜಿಆರ್ಎಸ್ಎಸ್ ನಿರಾಶ್ರಿತರ ಮತ್ತು ವೃದ್ಧರ ಬೃಂದಾವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ನೂರಾರು ಕಾರ್ಯಕತರ್ಯರು ರಾಜಶೇಖರ್ ದಂಪತಿಯನ್ನು ಅಭಿನಂದಿಸಿ, ಕೇಕ್ ಕತ್ತರಿಸಿ ವೃದ್ಧಾಶ್ರಮದಲ್ಲಿರುವ ಹಿರಿಯ ಮಹಿಳೆಯರಿಗೆ ಕೇಕ್ ತಿನ್ನಿಸುವ ಮೂಲಕ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಹೃದಯವಂತ ಕನ್ನಡಿಗರ ವೇದಿಕೆಯ ಅಧ್ಯಕ್ಷ ಡಿಪಿಕೆ ಪರಮೇಶ್ ಮಾತನಾಡಿ, ಕನ್ನಡ ನೆಲ, ಜಲ, ಭಾಷೆಯ ಉಳಿವಿಗಾಗಿ ತಮ್ಮ ಬದುಕನ್ನು ಮೀಸಲಿಟ್ಟಿರುವ ರಾಜಶೇಖರ್ ಅವರ ಹುಟ್ಟುಹಬ್ಬವನ್ನು ವೃದ್ಧಾಶ್ರಮಕ್ಕೆ ವಿವಿಧ ಅಡುಗೆ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ವೇದಿಕೆಯ ಪದಾಧಿಕಾರಿಗಳು ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕನ್ನಡಪರ ಹೋರಾಟಗಾರರನ್ನು ಜನ ಸಾಮಾನ್ಯರು ಗುರುತಿಸಬೇಕು, ಪ್ರಕೃತಿ ಪರಿಸರ ನಾಶವಾಗುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ, ಇದಕ್ಕೆ ಜನರ ಬೇಜವಾಬ್ದಾರಿಯೇ ಕಾರಣ, ಹೀಗಾಗಿ ಸಮಾಜಕ್ಕೆ ಒಂದು ಸಂದೇಶ ನೀಡುವ ಸಲುವಾಗಿ ವೃದ್ಧಾಶ್ರಮಕ್ಕೆ ಅಡುಗೆ ಪರಿಕರಗಳನ್ನು ವಿತರಿಸಿ ರಾಜಶೇಖರ್ ಅವರ ವಿತರಿಸಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ರಾಜ್ಯ ಖಜಾಂಚಿ ನಂಜುಂಡಸ್ವಾಮಿ ಮಾತನಾಡಿ,ಬಿ.ಬಿ.ರಾಜಶೇಖರ್ ಅವರು ಕಳೆದ ೬ ವರ್ಷಗಳಿಂದ ಕನ್ನಡಾಂಬೆ ರಕ್ಷಣಾ ವೇದಿಕೆಯ ಮೂಲಕ ನಮ್ಮ ನಾಡು, ನುಡಿ, ಜಲ, ಭಾಷೆಯ ಉಳಿವಿಗಾಗಿ ಹೋರಾಟ ಮಾಡುತ್ತಿದ್ದಾರೆ. ಖಾಸಗಿ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿ ಎನ್ನುವ ಅವರ ಹೋರಾಟವು ಸಾಕಷ್ಟು ಫಲಪ್ರದವಾಗಿದೆ, ಸುಮಾರು ೭೦ ವರ್ಷಗಳ ವಯೋವೃದ್ಧರೇ ಇರುವ ಈ ವೃದ್ಧಾಶ್ರಮಕ್ಕೆ ಅನುಕೂಲವಾಗುವಂತೆ ನಾವು ಅಡುಗೆ ಪಾತ್ರೆಗಳನ್ನು ವಿತರಿಸಿ ನಮ್ಮ ನಾಯಕನ ಹುಟ್ಟುಹಬ್ಬ ಆಚರಿಸಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಹೇಳಿದರು.
ಕನ್ನಡಾಂಬೆ ರಕ್ಷಣಾ ವೇದಿಕೆಯ ಅಧ್ಯಕ್ಷ ಬಿ.ಬಿ.ರಾಜಶೇಖರ್ ಅವರು ಮಾತನಾಡಿ, ಕನ್ನಡ ನೆಲ, ಜಲ, ಭಾಷೆಯ ಉಳಿವಿಗಾಗಿ ಯಾವುದೇ ರಾಜಿಗೆ ಒಳಗಾಗದೆ ಕಳೆದ ೬ ವರ್ಷಗಳಿಂದ ನಾವು ಸಂಘಟನೆ ಮೂಲಕ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನನ್ನ ಹುಟ್ಟುಹಬ್ಬವನ್ನು ಸೇವಾಕಾರ್ಯಗಳ ಮೂಲಕ ವೇದಿಕೆಯ ಪದಾಧಿಕಾರಿಗಳು ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ. ಅವರ ಅಭಿಮಾನಕ್ಕೆ ವಿಶ್ವಾಸಕ್ಕೆ ಪ್ರೀತಿಗೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ರೈತಸಂಘಟನೆಗಳು, ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ರಾಜಶೇಖರ್ ಅವರನ್ನು ಗೌರವಿಸಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಪಿಜಿಆರ್ಎಸ್ಎಸ್ ವೃದ್ಧಾಶ್ರಮದ ಯಾದವ್ ಹರೀಶ್, ಆತ್ಮಾನ್ ಸತೀಶ್, ವೇದಿಕೆಯ ಸಿಂಧುವಳ್ಳಿ ಶಿವಕುಮಾರ್, ಕಿಕ್ಕೇರಿ ಕಿರಣ, ರವಿಗೌಡ, ತಾರಾ, ವತ್ಸಲ, ಮಂಜುಳ, ಕಿರಣ, ಲೋಕೇಶ್, ಸೋಮಶೇಖರ್, ಕಾವಿ ಬಸಪ್ಪ, ವಿಷ್ಣು, ಈರಪ್ಪನಕೊಪ್ಪಲು ಶಿವಕುಮಾರ್, ಸವಿತ, ಪಲ್ಲವಿ, ಪವಿತ್ರ, ಹರಿಣಿ , ಜಯಲಕ್ಷ್ಮಿ ಮತ್ತಿತರರು ಹಾಜರಿದ್ದರು.
