ಮೈಸೂರು: ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ಏರ್ಪಡಿಸಿದ್ದ ಮೂಲಮಟ್ಟಿನ ಜನಪದ ಗಾಯನ ಕಾರ್ಯಕ್ರಮ ವಿದ್ಯಾರ್ಥಿಗಳ ಮನ ಸೂರೆಗೊಂಡಿತು.
ಪ್ರಖ್ಯಾತ ಜಾನಪದ ಗಾಯಕ
ಮಾರಶೆಟ್ಟಿಹಳ್ಳಿಯ ಕಂಸಾಳೆ ಮಹದೇವ ಮತ್ತು ಆರು ಜನರ ತಂಡ ಜಾನಪದ ಹಾಡುಗಳ ಮೂಲ ಮಟ್ಟುಗಳನ್ನು ಹಾಡಿ ರಂಜಿಸಿದರು.
ಮಲೆ ಮಹದೇಶ್ವರ, ಸಿದ್ದಪ್ಪಾಜಿ, ನಂಜುಂಡೇಶ್ವರ, ಚಾಮುಂಡೇಶ್ವರಿ, ಮಂಟೇಸ್ವಾಮಿ ಸೇರಿದಂತೆ ಹಳೆ ಮೈಸೂರು ಭಾಗದ ಹಲವಾರು ಕುಲ ದೇವರುಗಳ ಮೂಲ ಜಾನಪದ ಶೈಲಿಯ ಹಾಡುಗಳನ್ನು ಹಾಡಿ ಖುಷಿ ಪಡಿಸಿದರು.
ಅಷ್ಟೇ ಅಲ್ಲ, ಹಲವಾರು ಪ್ರಸಂಗಗಳನ್ನು ಹಾಡಿ, ಅವುಗಳ ಹಿನ್ನೆಲೆ, ಸಂದರ್ಭ, ಅರ್ಥ, ವ್ಯಾಪ್ತಿ, ಗುಣ ಮತ್ತು ಅವಗುಣ, ಭಾವ, ಸ್ವಭಾವ ಕುರಿತು ಜಾನಪದ ದಾಟಿಯಲ್ಲಿ ಮನ ಮುಟ್ಟುವಂತೆ ವಿವರಿಸಿ ಅರ್ಥ ಕೂಡಾ ತಿಳಿಸಿಕೊಟ್ಟರು.
ಸುಮಾರು 2 ಗಂಟೆಗಳ ಕಾಲ ಜನಪದ ಶೈಲಿಯ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳಿಗೆ ಮನರಂಜನೆಯ ಜೊತೆಗೆ ಜಾನಪದ ಕುರಿತು ಅರಿವು ಮೂಡಿಸಿದರು.
ಹಾಡಿನ ಮಟ್ಟುಗಳು ನೆರೆದಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಮಂತ್ರ ಮುಗ್ಧಗೊಳಿಸಿದವು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಪ್ರೊ. ಅಬ್ದುಲ್ ರಹಿಮಾನ್ ಎಂ. ಅವರು ಮೂಲ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು.
ಜನಪ್ರಿಯ ದಾಟಿಯ ಸಂಗೀತ ಮತ್ತು ಕಲೆಗಳಿಗೆ ತಾಯಿಬೇರು ಜನಪದ ಎಂಬುದನ್ನು ಯುವ ಜನಾಂಗಕ್ಕೆ ತಿಳಿಸುವ ಅಗತ್ಯವಿದೆ. ಹಾಗಾಗಿ, ಜನಪದ ಕಲೆಗಳ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯ ಎಂದು ಹೇಳಿದರು.
ಸ್ಥಳ ಪುರಾಣಗಳಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಜನಪದವು ಆಯಾ ಸಂಸ್ಕೃತಿಯ ಅನುಸಾರ ವಿಕಸನಗೊಳ್ಳುತ್ತದೆ. ಹಾಗಾಗಿ ಸ್ಥಳೀಯ ಜಾನಪದ ಕಲೆಗಳು ಹೆಚ್ಚು ಮಹತ್ವ ಪಡೆದಿವೆ ಇಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಾನಪದ ಗಾಯಕರ ತಂಡದ ಸದಸ್ಯರಾದ
ಕಂಸಾಳೆ ಮಹದೇವು, ಚಂದ್ರು ಕೋಟೆ, ಮಣಿಕಂಠ, ಪ್ರಸಾದ್ ಮತ್ತು ಮಹದೇವ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಥಮ ಬಿ.ಎಎಸ್ಸಿ, ಎಚ್. ವಿಭಾಗದ ಸಿಂಚನ ಮತ್ತು ತಂಡ ಪ್ರಾರ್ಥನೆ ಮಾಡಿದರೆ, ಕನ್ನಡ ಸಹ ಪ್ರಾಧ್ಯಾಪಕಿ ಡಾ. ಕಾವೇರಿ ಎನ್ ಸ್ವಾಗತಿಸಿದರು ಮತ್ತು ಎಚ್. ಪಿ. ಚಂದ್ರಕಲಾ ವಂದಿಸಿದರು,ಕನ್ನಡ ಸಹ ಪ್ರಾಧ್ಯಾಪಕ ಡಾ. ಸಿದ್ದೇಗೌಡ ಎಸ್.ಪ್ರಾಸ್ತಾವಿಕ ನುಡಿ ಆಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಜೆ.ಭೀಮೇಶ್,ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಡಾ. ನಂದಕುಮಾರ್ ವಿ, ವಿಭಾಗದ ಅಧ್ಯಾಪಕರಾದ ಡಾ.ರೇಖಾ ಎಚ್. ಎಲ್. ಡಾ.ಮಂಜುನಾಥ ಕೆ. ಎಂ, ಡಾ. ಹರೀಶ್ ಸೇರಿದಂತೆ ಅಧ್ಯಾಪಕರು, ಅಧ್ಯಾಪಕೇತರರು ವಿದ್ಯಾರ್ಥಿಗಳು ಹಾಜರಿದ್ದರು.
