(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ನಾನು ಶಾಸಕನಾಗಲು ಸಿದ್ದರಾಮಯ್ಯರವರ ಕೃಪಾಶೀರ್ವಾದ ಕಾರಣ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಮನದಾಳದಿಂದ ನುಡಿದರು.
ಅವರು ನನ್ನನ್ನು ಗುರುತಿಸಿ 2018ರ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರಕ್ಕೆ ಟಿಕೆಟ್ ನೀಡದಿದ್ದರೆ 2013ರಲ್ಲಿ ನಾನು ಶಾಸಕನಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಸ್ಮರಿಸಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಎಸ್ಇಪಿ ಮತ್ತು ಟಿಎಸ್ಪಿ ಯೋಜನೆಯಡಿ 75 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.
ಕುಣಗಳ್ಳಿ ಗ್ರಾಮದಲ್ಲಿ 10 ಲಕ್ಷ ವೆಚ್ಚದ ರಸ್ತೆ- ಚರಂಡಿ ಕಾಮಗಾರಿ ಮತ್ತು ಅಂಬೇಡ್ಕರ್ ಭವನದ ಬದಿಯಲ್ಲಿ 10 ಲಕ್ಷ ವೆಚ್ಚದ ಮಳಿಗೆ ನಿರ್ಮಾಣ ಕಾಮಗಾರಿ, ಲಕ್ಕರಸಪಾಳ್ಯ ಗ್ರಾಮದಲ್ಲಿ 15 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ, ಹರಳೆ ಗ್ರಾಮದಲ್ಲಿ 20 ಲಕ್ಷ ವೆಚ್ಚದ ರಸ್ತೆ ಚರಂಡಿ ಕಾಮಗಾರಿ ಹಾಗೂ ಮುಳ್ಳೂರು 20 ಲಕ್ಷ ವೆಚ್ಚದ ರಸ್ತೆ ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ನಡುವೆ ಲಕ್ಕರಸಪಾಳ್ಯ ಗ್ರಾಮದಲ್ಲಿ ಮಾತನಾಡಿದ ಅವರು ಪ್ರಾರಂಭದಲ್ಲಿ ಸಿದ್ದರಾಮಯ್ಯರವರ ಆಡಳಿತ ವೈಖರಿಯನ್ನು ವಿರೋಧ ಪಕ್ಷಗಳು ಟೀಕೆಸುತ್ತಿದ್ದು ಆದರೆ ಅವರು ಅದಕ್ಕೆಲ್ಲ ಸೊಪ್ಪು ಹಾಕದೆ ಟೀಕೆಗಳು ಸಾಯುತ್ತವೆ ಕೆಲಸ ಸದ್ದು ಮಾಡುತ್ತದೆ ಎಂಬುದನ್ನು ತೋರಿಸಿದರು ಎಂದು ಹೇಳಿದರು.
1993-94 ರಲ್ಲಿ ಸಿದ್ದರಾಮಯ್ಯ ನವರು ದಿವಂಗತ ಜೆ.ಹೆಚ್. ಪಟೇಲ್ ರವರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. ಆವಾಗಲೂ ನಾನು ಸೇರಿದಂತೆ ದಿವಂಗತ ಹೆಚ್.ಎಸ್ ಮಹಾದೇವ ಪ್ರಸಾದ್, ಎಸ್. ಜಯಣ್ಣ ಹೆಚ್ ಸಿ ಮಹದೇವಪ್ಪ ಕೆ ವೆಂಕಟೇಶ್ ಹಾಗೂ ಇನ್ನೂ ಅನೇಕರು ಸಿದ್ದರಾಮಯ್ಯರವರ ಜೊತೆಯಲ್ಲಿದ್ದೆವು. ನಂತರ 2013-14ರಲ್ಲಿ ಅವರು ಮುಖ್ಯಮಂತ್ರಿಯಾದರು. ಅಂದು ಜನತೆಗೆ ಭಾಗ್ಯಗಳ ಭಾಗ್ಯ ಕೊಟ್ಟರು ಆ ಭಾಗ್ಯಗಳ ಬೆನ್ನಲ್ಲೇ ನಮ್ಮ ಪಕ್ಷ 2023 ರಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ತಿಳಿಸಿದರು.
ಈ ಅವಧಿಯಲ್ಲಿ ಪಂಚ ಗ್ಯಾರಂಟಿಗಳ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ವೇಳೆ ವಿರೋಧ ಪಕ್ಷದವರು ಸರ್ಕಾರ ದಿವಾಳಿಯಾಗುತ್ತಿದೆ ಎಂದು ಟೀಕೆ ಮಾಡ ತೊಡಗಿದರು. ನಾವು ಒಂದೇ ಸಮುದಾಯದವರಿಗೆ ಅಥವಾ ಒಂದೇ ಪಕ್ಷದವರಿಗೆ ಈ ಯೋಜನೆಯನ್ನು ನೀಡಿದ್ದಲ್ಲ ಇದರ ಸೌಲಭ್ಯವನ್ನು ಎಲ್ಲಾ ಪಕ್ಷದವರು ಪಡೆದುಕೊಳ್ಳುತ್ತಿದ್ದಾರೆ. ಇಂದು ಇಡೀ ದೇಶವೇ ಸಿದ್ದರಾಮಯ್ಯ ಅವರನ್ನು ಕೊಂಡಾಡುತ್ತಿದೆ ಯಾರು ಟೀಕೆ ಮಾಡುತ್ತಿದ್ದರೊ ಅವರೇ ವಿವಿಧ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಕರಣೆ ಮಾಡುತ್ತಿದ್ದಾರೆ. ವಾರ್ಷಿಕವಾಗಿ 55 ಸಾವಿರ ಕೋಟಿ ರೂ. ಅನುದಾನ ವನ್ನು ಗ್ಯಾರಂಟಿ ಯೋಜನೆಗಳಿಗೆ ಕಾಯ್ದಿರಿಸಿದ್ದಾರೆ ಎಂದು ಶಾಸಕರು ಗುಣಗಾನ ಮಾಡಿದರು.
ಈಗ ಎಲ್ಲಾ ಕಡೆ ಗ್ರಾಮೀಣ ರಸ್ತೆಗಳು ಹದಗೆಟ್ಟಿವೆ, ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಸಿಎಂ ಅನುದಾನ ನೀಡಿದ್ದಾರೆ. ಅನುದಾನವನ್ನು ಜಿಲ್ಲಾ ಪಂಚಾಯತ್ ಆಥವಾ ಪಿಡಬ್ಲ್ಯೂಡಿ ಇಲಾಖೆ ಮೂಲಕ ಅನುಷ್ಠಾನ ಮಾಡಬೇಕು, ಆದರೆ ಈ ಕಾಮಗಾರಿಗಳಿಗೆ ಟೆಂಡರ್ ಹಾಕುವವರು ಯಾರೂ ಇಲ್ಲ. ಗ್ರಾ.ಪಂ. ಅಧಿಕಾರದ ಅವಧಿ ಈ ತಿಂಗಳಿಗೆ ಕೊನೆಯಾಗಲಿದೆ. ಮುಂದೆ ಗ್ರಾ.ಪಂ, ತಾ.ಪಂ, ಜಿ.ಪಂ. ಚುನಾವಣೆ ಗಳು ಸಾಲು ಸಾಲಾಗಿ ಬರಲಿವೆ ಅಲ್ಲಿಯವರೆಗೆ ಗ್ರಾಮೀಣ ರಸ್ತೆಗಳು ನಿರ್ಮಾಣವಾಗಬೇಕು ಎಂದು ಹೇಳಿದರು.
ಜಿಲ್ಲೆಗೆ ಇನ್ನೊಂದು ಅಲ್ಪಸಂಖ್ಯಾತರ ವಸತಿ ಶಾಲೆ ಆಗಲಿದೆ ಅದು ಈ ಕ್ಷೇತ್ರದಲ್ಲಿಯೇ ಪ್ರಾರಂಭವಾಗಲಿದೆ ಇಲ್ಲಿ ಕೇವಲ ಮುಸಲ್ಮಾನರು ಮಾತ್ರವಲ್ಲದೆ ಕ್ರೈಸ್ತರು, ಸಿಕ್ಕರು, ಜೈನರು ಎಲ್ಲರಿಗೂ ಅವಕಾಶ ವಾಗಲಿದೆ. ಬಡ ರೈತಾಪಿ ವರ್ಗಗಳ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸುವ ಕೆಲಸ ಮಾಡುತ್ತಿದೆ ಇದು ಎಲ್ಲಾ ಸಮುದಾಯದ ಜನರಿಗೂ ಅನ್ವಯವಾಗಲಿದೆ.
ಸಿದ್ದರಾಮಯ್ಯರವರು ಗ್ಯಾರಂಟಿ ಯೋಜನೆಗಳಿಗೂ ಅನುದಾನ ಸರಿದೂಗಿಸುವುದರೊಟ್ಟಿಗೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೂ ಅನುದಾನ ನೀಡುತ್ತಿದ್ದಾರೆ. ಅವರ ಕೃಪಾಶೀರ್ವಾದದಿಂದ ನಾನು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದೇನೆ ಎಂದು ಕೃಷ್ಣಮೂರ್ತಿ ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕುಂತೂರು ಮೂಳೆ ರಾಜೇಂದ್ರ, ಲ್ಯಾಂಡ್ ಆರ್ಮಿ ಎ ಇ ಇ ಚಿಕ್ಕಲಿಂಗಯ್ಯ, ಸ್ಥಳೀಯ ಗ್ರಾಪಂ ಅಧ್ಯಕ್ಷೆ ಶಾಂತಮ್ಮ, ಮಾಜಿ ಅಧ್ಯಕ್ಷ ಲಿಂಗಯ್ಯ, ಹರಳೆ ಗ್ರಾ.ಪಂ ಅಧ್ಯಕ್ಷರು ನಾಗರಾಜು, ಸದಸ್ಯರು,
ಮುಳ್ಳೂರು ಗ್ರಾ.ಪಮ ಅಧ್ಯಕ್ಷ ಕಮಲಮ್ಮ, ಉಪಾಧ್ಯಕ್ಷರು ದೊರೆರಾಜು, ಪಿಡಿಒ ಗಳಾದ ಜುನೈದ್ ಅಹಮದ್, ರಾಜಮ್ಮಣಿ, ಸವಿತಾ, ಕೆ.ಆರ್.ಐ.ಡಿ.ಎಲ್ ಎಇಇ ಚಿಕ್ಕಲಿಂಗಯ್ಯ, ಮುಖಂಡರಾದ ರಾಜು ಚೇತನ್ ದೊರೆರಾಜು, ಮಹೇಶ್ ಮತ್ತಿತರರು ಹಾಜರಿದ್ದರು.
