ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ಯಶಸ್ವಿಯಾಗಿ ಮುಗಿಸಿದ ಎಲ್ಲಾ 13 ಆನೆಗಳು ಇಂದು ಕಾಡಿನತ್ತ ತೆರಳಿದವು.
ಮೈಸೂರು ಅರಮನೆಯಲ್ಲಿ ಬೆಳಿಗ್ಗೆ 12 ಗಂಟೆಗೆ ನಡೆದ ಬೀಳ್ಕೊಡುಗೆ ಕಾರ್ಯಕ್ರಮದ ಬಳಿಕ ಗಜಪಡೆ ಕಾಡಿಗೆ ವಾಪಸ್ ಆಗಿದೆ.
ಕಾಡಿನಿಂದ ನಾಡಿಗೆ ಬಂದಿದ್ದ ಆನೆಗಳ ತೂಕದಲ್ಲಿ ಹೆಚ್ಚಳವಾಗಿದೆ. ಜಂಬೂಸವಾರಿ ಬಳಿಕ ಮೈಸೂರಿನ ಧನ್ವಂತರಿ ರಸ್ತೆಯ ಸಾಯಿರಾಂ ಅಂಡ್ ಕಂ ವತಿಯಿಂದ ಎಲ್ಲಾ ಆನೆಗಳಿಗೆ ತೂಕ ಪರೀಕ್ಷೆ ನಡೆಸಲಾಯಿತು.
ಗಜಪಡೆಯ ತೂಕದ ವಿವರ: ಅಭಿಮನ್ಯು – 5585 ಕೆಜಿ, ರೂಪ – 3290 ಕೆಜಿ, ಮಹೇಂದ್ರ – 5620 ಕೆಜಿ, ಗೋಪಿ – 5415 ಕೆಜಿ, ಸುಗ್ರೀವ – 6105 ಕೆಜಿ, ಶ್ರೀರಾಮ – 5150 ಕೆಜಿ, ಚೈತ್ರಾ – 3520 ಕೆಜಿ, ಶ್ರೀಕಂಠ – 6040 ಕೆಜಿ, ಏಕಲವ್ಯ – 5915 ಕೆಜಿ, ಕಾವೇರಿ – 3285 ಕೆಜಿ, ಪ್ರಶಾಂತ – 5425 ಕೆಜಿ, ಲಕ್ಷ್ಮೀ – 4010 ಕೆಜಿ, ಧನಂಜಯ – 5570 ಕೆಜಿ.
ದಸರಾ ಮುಗಿದ ಹಿನ್ನೆಲೆ ಗಜಪಡೆಯನ್ನು ಇಂದೇ ಕಾಡಿಗೆ ಕಳುಹಿಸಲಾಗಿದೆ ಎಂದು ಹಿರಿಯ ಅರಣ್ಯಾಧಿಕಾರಿ ಪ್ರಭುಗೌಡ ತಿಳಿಸಿದರು.
ಈ ಬಗ್ಗೆ ಹೈ ಪವರ್ ಕಮಿಟಿ ಮೀಟಿಂಗ್ ನಲ್ಲಿ ತೀರ್ಮಾನ ಆಗಿತ್ತು. ಸಾಮಾನ್ಯವಾಗಿ ದಸರಾ ಮುಗಿದ ಮರುದಿನ ಆನೆಗಳಿಗೆ ವಿಶ್ರಾಂತಿ ನೀಡಲಾಗುತ್ತಿತ್ತು, ಆದರೆ ಈ ಬಾರಿ ನಾಳೆ ಶುಕ್ರವಾರ ಇರುವ ಕಾರಣ ಇಂದೇ ಕಾಡಿಗೆ ಕಳುಹಿಸುವ ತೀರ್ಮಾನ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ನಾಡಹಬ್ಬ ದಸರಾ ಯಶಸ್ವಿಯಾಗಿ ಮುಗಿದಿದ್ದು, ಅದರಲ್ಲೂ ಪ್ರಶಾಂತ ಆನೆ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಎಲ್ಲಾ ಆನೆಗಳ ಆರೋಗ್ಯ ಚೆನ್ನಾಗಿದೆ ಎಂದು ಪ್ರಭುಗೌಡ ತಿಳಿಸಿದರು.
