ಬೆಂಗಳೂರು: ಇದೇ ಅ. 26 ರಂದು ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಬೆಳಗಾವಿಯಲ್ಲಿ ನಿಗದಿಯಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ,
ಸಭೆಯನ್ನು ಮೊದಲು ನೀವು ಮಾಡಿ, ನಂತರ ನಾವು ಸಭೆ ಮಾಡುತ್ತೇವೆ ಎಂದು ಜೋಶಿ ಅವರು ಹೇಳಿದ್ದಾರೆ,ಹಾಗಾಗಿ 26 ರ ಸಭೆಗೆ ಬರುವುದಿಲ್ಲ,ಕಬ್ಬು ಬೆಳೆಗಾರರ ಸಮಸ್ಯೆ ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶಕ್ಕೆ ಸಂಬಂಧಿಸಿದ ವಿಚಾರ. ಈ ಕುರಿತು ಕೇಂದ್ರ ಮಟ್ಟದಲ್ಲಿ ಅಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದಿದ್ಸಾರೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಅರಣ್ಯ ಭೂಮಿ ವಿವಾದಗಳಿಗೆ ಸಂಬಂಧಪಟ್ಟ ಕೇಂದ್ರ ಸಚಿವರ ಜೊತೆ ಚರ್ಚೆ ನಡೆಸಲಾಗುತ್ತದೆ. ಗೋವಾದಲ್ಲಿ ಚುನಾವಣೆ ಇರುವ ಕಾರಣ ಮಹದಾಯಿ ಕುರಿತು ತೀರ್ಮಾನ ಕೈಗೊಳ್ಳುವುದು ಸ್ವಲ್ಪ ಕಷ್ಟವಾಗಬಹುದು. ತುಂಗಭದ್ರಾ ನೀರಿನ ವಿಚಾರವಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಪರಸ್ಪರ ಭೇಟಿಯಾಗಿ ಚರ್ಚಿಸಲು ಮನವಿ ಮಾಡಲಾಗಿದೆ. ಆಂಧ್ರ ಅಥವಾ ದೆಹಲಿಯಲ್ಲಿ ಈ ಭೇಟಿ ನಡೆಸಲಾಗುವುದು. ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ತೀವ್ರವಾಗಿದ್ದು, ರೈತರಿಂದ ನೀರಿನ ಬೇಡಿಕೆ ವಿಪರೀತವಾಗಿದೆ. ಮಳೆಯಿಲ್ಲದ ಕಾರಣ ಮುಂದಿನ ಕಾರ್ಯತಂತ್ರ ರೂಪಿಸಬೇಕಿದೆ. ಬರಗಾಲದ ಕುರಿತು ರಾಜ್ಯದ ಬೇಡಿಕೆಗಳನ್ನು ಸಲ್ಲಿಸಲು ಪ್ರಧಾನಮಂತ್ರಿ ಹಾಗೂ ಗೃಹಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಡಿಕೆಶಿ ತಿಳಿಸಿದರು.
ಐಟಿಐ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸಮಯ ಕೋರಲಾಗಿದೆ. ದಸರಾ ಕಾರ್ಯ ನಿಮಿತ್ತ ಅವರಿಗೂ ಬಿಡುವಿಲ್ಲದ ಕಾರಣ, ಸಮಯ ಸಿಕ್ಕ ಕೂಡಲೇ ಈ ಕುರಿತು ಚರ್ಚಿಸಲಾಗುವುದು ಎಂದು ಸಿಎಂ ತಿಳಿಸಿದರು.
ಈ ಬಾರಿ ಕೂಡಾ ದಸರಾ ಜಂಬೂಸವಾರಿ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ಇಡೀ ಭಾರತದ ವೈಭವವನ್ನು ಸಾರುವಂತಹ ಪಂಜಿನ ಕವಾಯತು ಹಾಗೂ ಸ್ತಬ್ಧಚಿತ್ರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಕೇರಳ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ದಸರೆಗೆ ಬಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಕ್ಕೂ ಅವರ ರಾಜ್ಯಗಳ ಕಲಾತಂಡಗಳನ್ನು ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಸಚಿವ ಕೆ.ಜೆ. ಜಾರ್ಜ್ ಅವರು ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಹಾಗೂ ಬಸವರಾಜ ರಾಯರೆಡ್ಡಿ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದ ಸಚಿವರು ಹಾಗೂ ಅಧಿಕಾರಿಗಳು ದಸರಾವನ್ನು ಯಶಸ್ವಿಗೊಳಿಸಲು ಶ್ರಮಿಸಿದ್ದಾರೆ. ಪರಿಷತ್ ಚುನಾವಣೆ ಇದ್ದ ಕಾರಣಕ್ಕೆ ಒಂದಷ್ಟು ಜನ ಸಚಿವರಿಗೆ ವಿನಾಯಿತಿ ನೀಡಲಾಗಿತ್ತು. ಡಿಸಿಎಂ ಪರಮೇಶ್ವರ್ ಅವರು ತುಮಕೂರು ದಸರಾದಲ್ಲಿ ಭಾಗಿಯಾಗಿದ್ದರು. ಜಯಮಾಲಾ, ರಾಕ್ ಲೈನ್ ವೆಂಕಟೇಶ್ ನೇತೃತ್ವದ ಚಲನಚಿತ್ರ ವಾಣಿಜ್ಯ ಮಂಡಳಿ ತಂಡ, ಪ್ರಸಿದ್ದ ಕ್ರೀಡಾಪಟುಗಳು, ಭಾರತೀಯ ಸೇನೆ, ವಾಯುಪಡೆ, ಹೆಚ್ ಎಎಲ್, ಹೆಚ್ ಎಂಟಿ ಮುಂತಾದ ಕೇಂದ್ರ ಸಂಸ್ಥೆಗಳು ತಮ್ಮ ಟ್ಯಾಬ್ಲೋಗಳ ಮೂಲಕ ಮೆರುಗು ತಂದವು.ಎಲ್ಲರಿಗೂ ನನ್ನ ಕೃತಜ್ಞತೆಗಳು. ಡ್ರೋಣ್ ಪ್ರದರ್ಶನ ಹೊಸ ದಾಖಲೆ ಬರೆದಿದೆ ಎಂದು ಮುಖ್ಯ ಮಂತ್ರಿಗಳು ಹೇಳಿದರು.
ಶಿವಮೊಗ್ಗ ದಸರಾದಲ್ಲಿ ದುರ್ಘಟನೆ ನಡೆದಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ, ಇಂತಹ ಘಟನೆಗಳು ನಡೆಯುತ್ತವೆ ಎನ್ನುವ ಅರಿವು ನನಗೆ ಇದ್ದ ಕಾರಣಕ್ಕೆ ಅರಣ್ಯ ಸಚಿವರಾದ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ಮೈಸೂರು ದಸರಾದಲ್ಲಿ ಎಚ್ಚರಿಕೆ ತೆಗೆದುಕೊಳ್ಳಲಾಗಿತ್ತು. ಅಂಬಾರಿ ಹೊರಲು ಬೇರೆ ಆನೆ ಆಯ್ಕೆ ಮಾಡಲಾಗಿತ್ತು. ಕೊನೆಗೆ ಪ್ರಶಾಂತನನ್ನು ಆಯ್ಕೆ ಮಾಡಲಾಯಿತು.
ಆದರೆ ಶಿವಮೊಗ್ಗದಲ್ಲಿ ಸ್ವಲ್ಪ ಯಾಮಾರಿದ್ದಾರೆ. ಮುಂದಿನ ಬಾರಿ ಇನ್ನಷ್ಟು ಎಚ್ಚರಿಕೆ ವಹಿಸಲಾಗುವುದು. ನಮಗಿದು ಎಚ್ಚರಿಕೆ ಘಂಟೆ. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ಡಿಕೆಶಿ ತಿಳಿಸಿದರು.
