ಮೈಸೂರು: ಶಿವಮೊಗ್ಗದಲ್ಲಿ ನಡೆದ ದಸರಾ ಜಂಬೂ ಸವಾರಿ ಮೆರವಣಿಗೆ ವೇಳೆ ಸೋಮಣ್ಣ ಆನೆ ಬೆದರಿ ಮಾಡಿದ ಅವಾಂತರ ಹಿನ್ನೆಲೆಯಲ್ಲಿ, ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಅವರು ಅರಣ್ಯಾಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಜವಾಬ್ದಾರಿತನ ತೋರಿದ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇದೇ ಮೊದಲ ಬಾರಿಗೆ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮತ್ತು ಸೂಕ್ತ ತಾಲೀಮು ಪಡೆಯದ ‘ಸೋಮಣ್ಣ’ ಆನೆಗೆ ಅಂಬಾರಿ ಹೊರಸಿದ್ದೇ ಈ ಅವಾಂತರಕ್ಕೆ ಮುಖ್ಯ ಕಾರಣ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಆರೋಪಿಸಿದ್ದಾರೆ.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸಾರ್ವಜನಿಕರ ಗದ್ದಲಕ್ಕೆ ಹೆದರಿದ ಸೋಮಣ್ಣ ಆನೆ ಏಕಾಏಕಿ ವಿರುದ್ಧ ದಿಕ್ಕಿನಲ್ಲಿ ಓಡಲಾರಂಭಿಸಿದೆ.
ಆನೆಯ ರಭಸದ ಓಟದಿಂದಾಗಿ ಅದರ ಮೇಲಿದ್ದ ೩೦೦ ಕ್ಕೂ ಹೆಚ್ಚು ಕೆಜಿ ತೂಕದ ಬೆಳ್ಳಿ ಅಂಬಾರಿ ಮತ್ತು ಚಾಮುಂಡೇಶ್ವರಿ ಮೂರ್ತಿ ಕೆಳಗೆ ಬಿದ್ದಿದೆ. ಆನೆ ಓಡಿದ ರಭಸಕ್ಕೆ ರಸ್ತೆ ಬದಿಯಲ್ಲಿದ್ದ ಕಾರು,ಬೈಕುಗಳು ಹಾಗೂ ಕಟ್ಟಡಗಳು ಜಖಂಗೊಂಡಿವೆ,
ಬಳಿಕ ಪಶುವೈದ್ಯಾಧಿಕಾರಿಗಳು ಆನೆಗೆ ಅರಿವಳಿಕೆ ಇಂಜೆಕ್ಷನ್ ನೀಡುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು ಕೊಂಚ ಸಮಾಧಾನ ತಂದಿದೆ ಎಂದಿದ್ದಾರೆ.
ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಅನುಭವವಿಲ್ಲದ ಹೊಸ ಆನೆಗೆ ನೇರವಾಗಿ ಅಂಬಾರಿ ಹೊರಿಸುವ ಜವಾಬ್ದಾರಿ ನೀಡಿದ ಅರಣ್ಯ ಇಲಾಖೆಯ ನಿರ್ಧಾರವು ಅಧಿಕಾರಿಗಳ ಬೇಜವಾಬ್ದಾರಿತನವನ್ನು ತೋರಿಸುತ್ತದೆ, ಸಾರ್ವಜನಿಕರ ಜೀವದ ಜೊತೆ ಅರಣ್ಯ ಇಲಾಖೆ ಆಟವಾಡಿದೆ ಎಂದು ಕಿಡಿಕಾರಿದ್ದಾರೆ.
ಇಷ್ಟೊಂದು ದೊಡ್ಡ ವೈಫಲ್ಯಕ್ಕೆ ಕಾರಣರಾದ ಡಿಎಫ್ಒ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಹಿರಿಯ ಅರಣ್ಯಾಧಿಕಾರಿಗಳನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
