ಮೈಸೂರು: ಜಿಟಿ ಜಿಟಿ ಮಳೆಯಲ್ಲೂ ಯುವ ದಸರಾ ಕೊನೆಯ ದಿನ ಭಾನುವಾರ ಹೆಸರಾಂತ ಗಾಯಕ ಸಿದ್ ಶ್ರೀರಾಮ್ ಅವರ ಗಾಯನಕ್ಕೆ ಯುವ ಸಮೂಹ ಸಾಗರದಂತೆ ಹರಿದುಬಂದಿತ್ತು.
ನಗರದ ಹೊರವಲಯದ ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರಸುಂದರಿ ದೇವಾಲಯದ ಹತ್ತಿರದ ಆವರಣದಲ್ಲಿ ಕಳೆದ 6 ದಿನಗಳಿಂದ ವಿಜೃಂಭಣೆಯಿಂದ ನಡೆಯುತ್ತಿರುವ ಯುವ ದಸರಾದ ಕಡೆಯ ದಿನ ಇಡೀ ಮೈದಾನ ತುಂಬಿ ತುಳುಕುತ್ತಿತ್ತು.
ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಗಾಯಕರಾಗಿ ಪ್ರಸಿದ್ಧಿ ಪಡೆದಿರುವ ಸಿದ್ ಶ್ರೀರಾಮ್ ಅವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮಕ್ಕೆ ಯುವಕ ಯುವತಿಯರು ಶಿಳ್ಳೆ ಚಪ್ಪಾಳೆಯೊಂದಿಗೆ ಕುಣಿದು ಕುಪ್ಪಳಿಸಿದರು.
ಕಾರ್ಯಕ್ರಮದಲ್ಲಿ ಸಿದ್ ಶ್ರೀರಾಮ್ ಅವರು ನಾನೇ ನೀನಂತೆ ನೀನಂತೆ ನೀನೆ ನಾನಂತೆ ನಾನಂತೆ, ಜಗವೇ ನೀ ನಂಗೆ ಗೆಳತಿಯೆ, ಮುಂಗಾರು ಮಳೆಯಲ್ಲಿ ನೆನೆಯುತ್ತಾ ನಾನಿಲ್ಲಿ ಪ್ರೀತಿಯ ಮುನ್ಸೂಚನೆ, ಮುದ್ದು ಗುಮ್ಮ ಮುದ್ದು ಗುಮ್ಮ ನೀನೆನೆ, ಹಾಯಾಗಿದೆ ಎದೆಯೊಳಗೆ, ಕಡಲಂತೆ ನೀನು, ಶುರುವಾಗಿದೆ ಪ್ರೀತಿ ಹೀಗೆ ಅನೇಕ ಕನ್ನಡ ಸೂಪರ್ ಹಿಟ್ ಹಾಡುಗಳನ್ನು ಹಾಡಿ ರಂಜಿಸಿದರು.
ಇದರ ಜೊತೆಗೆ ತಮಿಳು ಹಾಗೂ ತೆಲುಗಿನ ಪುಷ್ಪ ಚಿತ್ರದ ಶ್ರೀವಲ್ಲಿ, ಪ್ರೇಮ್ ವೆಲ್ಲುವ, ಈ ಮಾಯಾ ಪ್ರೇಮಿತೋ, ಬಹುಸ ಬಹುಸ, ಕಾಲವುಂಡೆ ವೇಗುಮಲೈ, ಆಕಾಶಮೈ ನೀವುಣೈ, ಒಕೆ ಒಕೆ ಲೋಕಂ ನುವ್ವೆ, ನೀಲಿ ನೀಲಿ ಆಕಾಶಂ, ಇಂಕಂ ಇಂಕಂ ನುವ್ವಾಲೆ ಹೀಗೆ ಹಲವಾರು ಜನಪ್ರಿಯ ಹಾಡುಗಳನ್ನು ಹಾಡಿ ಮೋಡಿ ಮಾಡಿದರು.
