ಮೈಸೂರು: ಪರಮಪೂಜ್ಯ ರಾಜಗುರುತಿಲಕ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 111ನೇ ಜಯಂತಿ ಮಹೋತ್ಸವದ ಅಂಗವಾಗಿ ನಾಳೆ (ಸೆ.25)
ಕಣ್ಣಿನ ದೃಷ್ಟಿಪಟಲ ರೋಗಗಳ ಕುರಿತು ಜ್ಯೋತಿರ್ಗಮಯ 2026 ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
ಮೈಸೂರಿನ ಜೆಎಸ್ಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಶಾಲಾಕ್ಯ ತಂತ್ರ ಸ್ನಾತಕೋತ್ತರ ವಿಭಾಗದ ವತಿಯಿಂದ ಈ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಸೆ.25ರಂದು ಸಂಜೆ 4 ಗಂಟೆಗೆ ಜೆಎಸ್ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಾಬ್ಧಿ ಭವನದಲ್ಲಿ ಆಯೋಜಿಸಲಾಗಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಜೆಎಸ್ಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಸರ್ಬೇಶ್ವರ್ ಕರ್ ಮಾತನಾಡಿದರು.
ಕಣ್ಣಿನ ಮಸೂರದ ಹಿಂಭಾಗದ ದೃಷ್ಟಿಪಟಲದ ಮೇಲೆ ಪರಿಣಾಮ ಬೀರುವ ಡಯಾಬಿಟಿಕ್ ರೆಟಿನೋಪತಿ, ವಯೋಸಹಜ ಮ್ಯಾಕ್ಯುಲಾರ್ ಎಡಿಮಾ ಮತ್ತು ರೆಟಿನಲ್ ವಾಸ್ಕುಲರ್ ಕಾಯಿಲೆಗಳು ದೃಷ್ಟಿಪಟಲ ರೋಗಗಳ ವ್ಯಾಪ್ತಿಗೆ ಬರುತ್ತವೆ ಎಂದು ತಿಳಿಸಿದರು.
ಈ ರೋಗಗಳು ಹಂತ ಹಂತವಾಗಿ ದೃಷ್ಟಿ ಶಕ್ತಿಯನ್ನು ಕುಗ್ಗಿಸಿ, ತೀವ್ರವಾದರೆ ಶಾಶ್ವತ ಅಂಧತ್ವಕ್ಕೆ ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಿ ಮಧುಮೇಹ, ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಳ ಮತ್ತು ಬದಲಾದ ಜೀವನಶೈಲಿಯಿಂದಾಗಿ ದೃಷ್ಟಿಪಟಲ ರೋಗಗಳು ಪ್ರಮುಖ ಸವಾಲಾಗಿವೆ. ಆಯುರ್ವೇದದ ಸಾಂಪ್ರದಾಯಿಕ ಚಿಕಿತ್ಸೆ ಮತ್ತು ನೇತ್ರ ಕ್ರಿಯಾ ಕಲ್ಪಗಳಂತಹ ವಿಶೇಷ ಚಿಕಿತ್ಸೆಗಳ ಮೂಲಕ ಈ ರೋಗಗಳ ನಿವಾರಣೆಗೆ ಅವಕಾಶವಿದೆ ಎಂದು ಅವರು ಹೇಳಿದರು.
ಈ ರಾಷ್ಟ್ರೀಯ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳಿಂದ 500ಕ್ಕೂ ಹೆಚ್ಚು ತಜ್ಞ ವೈದ್ಯರು, ಸಂಶೋಧಕರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿ ಸಂಶೋಧನಾ ಪ್ರಬಂಧ ಮತ್ತು ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ದೃಷ್ಟಿ ದೋಷಗಳ ಆಧುನಿಕ ಮತ್ತು ಸಮನ್ವಯಾತ್ಮಕ ನಿರ್ವಹಣಾ ವಿಧಾನಗಳ ಕುರಿತು ಚರ್ಚೆ ನಡೆಯಲಿದೆ. ಜೆಎಸ್ಎಸ್ ಸಂಸ್ಥೆಯು ಈಗಾಗಲೇ ನರರೋಗ, ಕ್ಯಾನ್ಸರ್ ಆರೈಕೆ ಮತ್ತು ಬಂಜೆತನ ರೋಗಗಳ ಕುರಿತು ಯಶಸ್ವಿ ಸಮ್ಮೇಳನಗಳನ್ನು ಆಯೋಜಿಸಿದೆ ಎಂದು ಡಾ. ಸರ್ಬೇಶ್ವರ್ ಕರ್ ವಿವರಿಸಿದರು.
ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ.
ಭಾರತೀಯ ವೈದ್ಯ ಪದ್ಧತಿಗಳ ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಮಂಡಳಿಯ ಅಧ್ಯಕ್ಷ ಡಾ. ಮುಕುಲ್ ಪಟೇಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ. ಬೆಟಸೂರಮಠ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಆಯುಷ್ ಆಯುಕ್ತ ಡಾ. ಸುನಿಲ್ ಪನ್ವರ್ ಮತ್ತು ಜೆಎಸ್ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಡಾ. ಗವಿಮಠ ಶಿವಾನಂದ್, ಪ್ರಾಧ್ಯಾಪಕರಾದ ಡಾ. ವಿ. ಶ್ರೀಶಾನಂದ ಶರ್ಮಾ ಮತ್ತು ಡಾ. ಸುಭಾಷ್ ಚಂದ್ರ ಬೋಸ್ ಉಪಸ್ಥಿತರಿದ್ದರು.
