ಬೆಳಗಾವಿ: ಬೆಳಗಾವಿ ಜಿಲ್ಲೆ,ಖಾನಾಪುರ ಅರಣ್ಯ ಉಪವಿಭಾಗದ ಭತ್ತದ ಗದ್ದೆಗಳಲ್ಲಿ ಕಾಡಾನೆಗಳು ಬೀಡು ಬಿಟ್ಟು ಸಾಕಷ್ಟು ಹಾನಿ ಮಾಡುತ್ತಿದ್ದು,ರೈತರು ಕಂಗಾಲಾದರೆ,
ಆನೆ ಹಿಂಡನ್ನು ಕಾಡಿಗೆ ಓಡಿಸಲಾಗದೆ ಅರಣ್ಯ ಇಲಾಖೆ ಅಧಿಕಾರಿಗಳು ಹೈರಾಣಾಗಿದ್ದಾರೆ.
ಒಂದು ವಾರದಿಂದ ಬೀಡುಬಿಟ್ಟಿರುವ ಆನೆಗಳ ಹಿಂಡಿನಲ್ಲಿ ಸುಮಾರು 9 ಆನೆಗಳು ಕಂಡುಬಂದಿವೆ.
ಬುಧವಾರ ತಡರಾತ್ರಿ ಖಾನಾಪುರ ಎಸಿಎಫ್ ಬಸವರಾಜ ವಾಳದ ಹಾಗೂ ವಲಯ ಅರಣ್ಯಾಧಿಕಾರಿ ಸಯ್ಯದಸಾಬ್ ನದಾಫ್ ಅವರ ನೇತೃತ್ವದಲ್ಲಿ ಇಂದು ಮುಂಜಾನೆವರೆಗೂ ಕೂಬಿಂಗ್ ನಡೆಸಿದರು.
ಈಗ ಆನೆಗಳ ಹಿಂಡು ಭೀಮಗಡ ವನ್ಯಜೀವಿ ವಲಯದ ಪಾಲಿ ಗ್ರಾಮದ ಭತ್ತದ ಗದ್ದೆಗಳಲ್ಲಿ ಇರುವುದನ್ನು ಖಚಿತಪಡಿಸಿದ್ದಾರೆ.
ಖಾನಾಪುರ ಉಪ ವಿಭಾಗದ ಪಾಲಿ, ಹೆಮ್ಮಡಗಾ, ಅಬನಾಳಿ, ಡೊಂಗರಗಾವ, ಶಿರೋಳಿವಾಡಾ ಪ್ರದೇಶದಲ್ಲಿ ಆನೆಗಳು ಓಡಾಡುತ್ತಿದ್ದು, ಒಂಟಿಸಲಗ, ಎರಡು ಪುಟ್ಟ ಮರಿಗಳು, ನಾಲ್ಕು ಆನೆಗಳು ಪಾಲಿ ಗ್ರಾಮದ ಬಳಿ ನಿನ್ನೆ ರಾತ್ರಿ ಭತ್ತದ ಗದ್ದೆಗಳಲ್ಲಿ ಅಡ್ಡಾಡಿವೆ.
ಪಟಾಕಿ,ಮದ್ದು ಸಿಡಿಸಿ ಓಡಿಸಲು ಅಧಿಕಾರಿಗಳು ಎಸ್ಟೆಲ್ಲಾ ಪ್ರಯತ್ನ ಪಟ್ಟರೂ ಆನೆಗಳು ಅತ್ತಿಂದಿತ್ತ ಅಡ್ಡಾಡಿ ಕಾಡಿಗೆ ಮರಳದೇ ಪೀಕಲಾಟ ತಂದಿವೆ.
ಭೀಮಗಡ ವನ್ಯಜೀವಿ ಅರಣ್ಯಧಾಮದ ಪಾಲಿ ಗ್ರಾಮದ ಬಳಿ ಕಾಡುರಸ್ತೆಯಂಚಿನಲ್ಲಿ ಬೀಡುಬಿಟ್ಟಿದ್ದ ಆನೆಗಳನ್ನು ನೋಡಿ ಬೈಕ್ ಸವಾರರು ಹೆದರಿ ಓಡಿದ್ದು, ಅರಣ್ಯ ಸಿಬ್ಬಂಧಿ ಸ್ಥಳಕ್ಕೆ ತಲುಪುವಷ್ಟರಲಗಲಿ ಹಿಂಡು ಮಾಯವಾಗಿತ್ತು.
ಬೆಳಗಾವಿ ಅರಣ್ಯ ವಿಭಾಗದಲ್ಲಿ ಆನೆಗಳ ಹಿಂಡಿನ ಸಂಚಾರ ಇದೇ ಮೊದಲು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ವಾಳದ ತಿಳಿಸಿದ್ದಾರೆ.
ಸಲಗದ ಜೊತೆಗೆ ಮರಿ ಆನೆಗಳು ಇರುವುದರಿಂದ ಈ ಹಿಂಡು ಭಯಾನಕವಾಗಿರುತ್ತದೆ. ಅರಣ್ಯಾಧಿಕಾರಿಗಳ ಗಮನಕ್ಕೆ ತಾರದೇ ಸಾರ್ವಜನಿಕರು ಕೂಗಾಟ ಮಾಡುವುದು, ಹತ್ತಿರ ಹೋಗುವುದು, ಪಟಾಕಿ ಸಿಡಿಸುವ ಇತರ ಯಾವುದೇ ಸಾಹಸ ಮಾಡಬಾರದು ಎಂದು ಡಿಸಿಎಫ್ ಎನ್. ಇ. ಕ್ರಾಂತಿ ಮನವಿ ಮಾಡಿದ್ದಾರೆ.
