(ವರದಿ. ಎಸ್ .ಪುಟ್ಟಸ್ವಾಮಿಹೊನ್ನೂರು)
ಯಳಂದೂರು: ಚಾಮರಾಜನಗರದಲ್ಲಿ ಅಕ್ಟೋಬರ್ 24 ಹಾಗೂ 25 ರಂದು ಆಯೋಜಿಸಿರುವ ಅಂತಾರಾಷ್ಟ್ರೀಯ 2 ನೇ ಬೌದ್ಧ ಮಹಾ ಸಮ್ಮೇಳನದ ಯಶಸ್ಸಿಗೆ ಪ್ರತಿ ಯೊಬ್ಬರೂ ಕೈ ಜೋಡಿಸಬೇಕು ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮನವಿ ಮಾಡಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮು ದಾಯ ಭವನದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ ಆಯೋಜನೆ ಸಂಬಂಧ ಅಗತ್ಯ ಸಿದ್ಧತೆ ಕುರಿತು ಆಯೋಜಿಸಿದ್ದ ಪೂರ್ವಭಾವಿ
ಸಭೆಯಲ್ಲಿ ಅವರು ಮಾತನಾಡಿದರು.
ಬುದ್ಧರ ನಾಗರಿಕತೆ ಹೆಚ್ಚಾಗಿರುವ ಚಾ.ನಗರದಲ್ಲಿ 2 ನೇ ಸಮ್ಮೇಳನ ನಡೆಸುವ ಬುದ್ಧನ ಅನುಯಾಯಿಯಾಗಿರುವ ನನಗೆ ಅವಕಾಶ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯ. ಸಮ್ಮೇಳನದ ಜವಾಬ್ದಾರಿಯನ್ನು ನೀಡಲಾಗಿದೆ, ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಈಗಾಗಲೇ ಸಿದ್ಧತೆ ಸಂಬಂಧ ಸಮುದಾಯದ ಮುಖಂಡರ ಜತೆ ಜಿಲ್ಲಾ ಕೇಂದ್ರದಲ್ಲಿ ಹಲವು ಬಾರಿ ಸಭೆ ನಡೆಸಲಾಗಿದೆ. ಸ್ವಾಗತ, ಪ್ರಚಾರ, ವೇದಿಕೆ, ವಸತಿ, ಸ್ವಚ್ಛತೆ, ಸಾಂಸ್ಕೃತಿಕ ಸೇರಿದಂತೆ ಹಲವು ಸಮಿತಿಗಳನ್ನು ರಚಿಸಿ ಮುಖಂಡರಿಗೆ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಹಾಲಿ,ಮಾಜಿ ಸಚಿವರು, ಶಾಸಕರು, ವಿವಿಧ ಮಠಾಧೀಶರು, ಧರ್ಮಗುರುಗಳು ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. ಆದ್ದರಿಂದ ಸಮ್ಮೇಳನದ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು.ತಮ್ಮ ಗ್ರಾಮಕ್ಕೆ ಆಗಮಿಸುವ ಟ್ಯಾಬ್ಲೊ ಮೂಲಕ ಸಮ್ಮೇಳನದ ಬಗ್ಗೆ ಪ್ರತಿ ಗ್ರಾಮದಲ್ಲೂ ಪ್ರಚಾರ ಕಾರ್ಯವಾಗಬೇಕು ಎಂದು ಕೃಷ್ಣಮೂರ್ತಿ ತಿಳಿಸಿದರು.
ತಿ.ನರಸೀಪುರ ಬೋಧಿರತ್ನ ಬಂತೇಜಿ ಮಾತನಾಡಿ, ಕೆಟ್ಟದನ್ನು ತ್ಯಜಿಸಿ ಒಳ್ಳೆಯ ಮಾರ್ಗದಲ್ಲಿ ನಡೆದಾಗ ದಮ್ಮ ಮಾರ್ಗವನ್ನು ಪಾಲಿಸಿದಂತಾಗುತ್ತದೆ. ದಮ್ಮವನ್ನು ಕಟ್ಟಿ ಬೆಳೆಸಬೇಕಿದೆ. ಆದ್ದರಿಂದ ಹನೂರು ಭಾಗದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮ್ಮೇಳನದ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು.
ಜೇತವನದ ಮನೋರಖಿತ ಬಂತೇಜಿ,ಸುಖತಾ ಪಾಲ ಬಂತೇಜಿ,ಬಂತೆ ಬುದ್ಧರತ್ನ, ಮಾತೆ ಗೌತಮಿ,ಸಮ್ಮೇಳನ ಆಚರಣಾ ಸಮಿತಿ ಪ್ರಧಾನ ಸಂಚಾಲಕ ಸಿ.ಎಂ ಕೃಷ್ಣಮೂರ್ತಿ, ಸಂಚಾಲಕರಾದ ವೆಂಕಟರಮಣಸ್ವಾಮಿ, ತಾಲ್ಲೂಕು ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಕೆಸ್ತೂರು ಸಿದ್ದರಾಜು,ಸಾಹಿತಿಗಳಾದ ಮಹದೇವ್ ಶಂಕನಪುರ, ಅಯ್ಯನಪುರ ಶಿವಕುಮಾರ್, ಡಿಎಸ್ಎಸ್ ಜಿಲ್ಲಾ ಸಂಚಾಲಕ ಸಿ. ರಾಜಣ್ಣ ಯರಿಯೂರು,ಮುಖಂಡರಾದ ವಡಗೆರೆ ದಾಸ್,ಮುಳ್ಳೂರು ಶಿವಮಲ್ಲು, ಮಾಜಿ ತಹಸೀಲ್ದಾರ್ ಮಹದೇವಯ್ಯ, ಸೇರಿದಂತೆ ಕೊಳ್ಳೇಗಾಲ, ಯಳಂದೂರು, ಸಂತೇಮರಳ್ಳಿ ಭಾಗದ ಎಲ್ಲಾ ಬೌದ್ಧ ಉಪಾಸಕರು, ಅನುಯಾಯಿಗಳು, ಸೇವಾ ಸಮಿತಿ ಮುಖಂಡರು ಹಾಜರಿದ್ದರು.
