ಮೈಸೂರು: ಸಾಲಮನ್ನಾ ವಿಚಾರವಾಗಿ ನಾವು ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಕಳೆದ ಬಾರಿ ಕೇಂದ್ರ ಸರ್ಕಾರಕ್ಕೆ 36 ಸಾವಿರ ಕೋಟಿ ಅನುದಾನ ಕೇಳಿ ಮನವಿ ಮಾಡಿದ್ದೆವು, ದೆಹಲಿಯಲ್ಲಿ ಪ್ರತಿಭಟನೆಯನ್ನೂ ಮಾಡಿದ್ದೆವು,ಆದರೆ ನ್ಯಾಯಾಲಯದ ಮೊರೆ ಹೋದ ನಂತರ ಕೇವಲ 3500 ಕೋಟಿ ರೂ. ನೀಡಿದ್ದಾರೆ ಎಂದು ಸಚಿವ ಡಾ.ಯತೀಂದ್ರ ಬಿಜೆಪಿಗರಿಗೆ ಟಾಂಗ್ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,ಮೊದಲು ಬಿಜೆಪಿ ನಾಯಕರು ಕೇಂದ್ರಕ್ಕೆ ಮನವಿ ಮಾಡಿ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೊಡಿಸಲಿ ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿಗಳು ಈಗಾಗಲೇ ವಿಜಯೇಂದ್ರ ಮತ್ತು ಆರ್.ಅಶೋಕ್ ಅವರಿಗೆ ದೆಹಲಿಗೆ ನಮ್ಮ ಜೊತೆ ಬನ್ನಿ ಎಂದು ಆಹ್ವಾನಿಸಿದ್ದಾರೆ. ಅವರು ನಮ್ಮ ಜೊತೆ ಬಂದು ರಾಜ್ಯಕ್ಕೆ ಬರಬೇಕಾದ ಪಾಲನ್ನು ಕೊಡಿಸಲಿ ಎಂದು ಆಗ್ರಹಿಸಿದರು.
ದಸರಾದಲ್ಲಿ ಕೆಲವು ಬದಲಾವಣೆ ತರುವ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು ಮುಖ್ಯಮಂತ್ರಿಗಳು ಕರೆದಿದ್ದ ಸಭೆಯಲ್ಲಿ ನಾನು ಕೂಡ ಭಾಗಿಯಾಗಿದ್ದೆ. ಸಭೆಯಲ್ಲಿ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಈ ಬಾರಿ ದಸರಾದಲ್ಲಿ ಸೇನಾ ಟ್ಯಾಬ್ಲೋ ಇರಲಿದೆ. ಸಾಧ್ಯವಾದರೆ ಸೇನಾ ಶಸ್ತ್ರಾಸ್ತ್ರಗಳ ಪರೇಡ್ ನಡೆಸಲು ಚಿಂತನೆ ನಡೆಸಲಾಗಿದೆ. ಜೊತೆಗೆ ಏರ್ ಶೋ ನಡೆಸುವ ಕುರಿತು ಚರ್ಚೆ ನಡೆಸಲಾಗಿದೆ. ಸಾಧ್ಯವಾಗುವ ಎಲ್ಲ ಹೊಸತನ ಮತ್ತು ಬದಲಾವಣೆಗಳನ್ನು ಈ ಬಾರಿಯ ದಸರಾಕ್ಕೆ ತರಲಾಗುವುದು ಎಂದು ಇದೇ ವೇಳೆ ಡಾ.ಯತೀಂದ್ರ ತಿಳಿಸಿದರು.
