ಮೈಸೂರು, ಸೆ. 2: ಮೈಸೂರು ನಗರದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಸಿ. ನಾರಾಯಣಗೌಡ ಅವರು ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮುಖಂಡರು ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಕೃಷ್ಣಮೂರ್ತಿಪುರಂನಲ್ಲಿರುವ ಹೋಟೆಲ್ ಮಾಲೀಕರ ಸಂಘದ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾರಾಯಣಗೌಡ ಅವರಿಗೆ ಪುಷ್ಪಗುಚ್ಛ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಹೋಟೆಲ್ ಉದ್ಯಮದ ಅಭಿವೃದ್ಧಿಗೆ ನಾರಾಯಣಗೌಡ ಅವರು ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿ ರಾಜ್ಯ ಮಟ್ಟದ ಜವಾಬ್ದಾರಿ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ವೀರ ಸಾವರ್ಕರ್ ಯುವ ಬಳಗದ ಸಂದೇಶ್ ಪವರ್, ಗಗನ್ ಗೌಡ, ಟಿ.ಎಸ್. ಅರುಣ್, ದೂರ ರಾಜಣ್ಣ, ರಾಕೇಶ್, ದಯಾನಂದ ನಾಯಕ್, ನಂದ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಶುಭಾಶಯ ಕೋರಿದರು.
ಸನ್ಮಾನ ಸ್ವೀಕರಿಸಿದ ನಾರಾಯಣಗೌಡ ಅವರು, ತಮ್ಮ ಮೇಲೆ ವಿಶ್ವಾಸವಿಟ್ಟು ರಾಜ್ಯ ಉಪಾಧ್ಯಕ್ಷರ ಜವಾಬ್ದಾರಿ ನೀಡಿರುವ ಸಂಘದ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ರಾಜ್ಯದ ಹೋಟೆಲ್ ಉದ್ಯಮದ ಬೆಳವಣಿಗೆ ಹಾಗೂ ಹೋಟೆಲ್ ಮಾಲೀಕರ ಸಮಸ್ಯೆಗಳ ಪರಿಹಾರಕ್ಕಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
