ಬೆಂಗಳೂರು: ಲೋಕ್ ಶಕ್ತಿ ಪಾರ್ಟಿಯ ಮಾಜಿ ರಾಜ್ಯಾಧ್ಯಕ್ಷ ಸಿ.ವಿ. ಸ್ಥಾವರಮಠ ಅವರು ತಮ್ಮ ಹಲವು ಪದಾಧಿಕಾರಿಗಳು, ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಇಂದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ಏರ್ಪಡಿಸಿದ್ದ ಸೇರ್ಪಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು, ನೈತಿಕ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ರಾಜಕಾರಣ ಮಾಡಬೇಕು ಎಂಬ ರಾಮಕೃಷ್ಣ ಹೆಗಡೆಯವರ ಆಶಯದ ಮೇರೆಗೆ ನಾನು ರಾಜಕೀಯ ಕ್ಷೇತ್ರಕ್ಕೆ ಬಂದವನು. ಆದರೆ ಇಂದು ರಾಜಕೀಯ ಕ್ಷೇತ್ರದಲ್ಲಿ ಮೌಲ್ಯಯುತ ಹಾಗೂ ನೈತಿಕ ರಾಜಕಾರಣ ಸಂಪೂರ್ಣವಾಗಿ ಮಾಯವಾಗಿರುವುದನ್ನು ನೋಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೌಲ್ಯಯುತ ರಾಜಕಾರಣದ ಮರುಸ್ತಾಪನೆಯ ಹುಡುಕಾಟದಲ್ಲಿಯೇ ನಾನು ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ,ಮೌಲ್ಯಾಧಾರಿತ ಹಾಗೂ ಉತ್ತರದಾಯಿತ್ವದ ರಾಜಕಾರಣಕ್ಕೆ ಮುನ್ನುಡಿ ಬರೆಯುವ ಉದ್ದೇಶದಿಂದ
ನಾವೆಲ್ಲರೂ ಒಗ್ಗಟ್ಟಾಗಿ ಆಮ್ ಆದ್ಮಿ ಪಕ್ಷದ ರಾಜಕೀಯ ಹೋರಾಟದಲ್ಲಿ ಭಾಗವಹಿಸುವ ಮೂಲಕ ದೇಶದಲ್ಲಿ ಮತ್ತೆ ನೈತಿಕ, ಮೌಲ್ಯಯುತ ಹಾಗೂ ಉತ್ತರದಾಯಿತ್ವದ ಅಧಿಕಾರ ವಿಕೇಂದ್ರೀಕರಣದ ಸಾಂವಿಧಾನಿಕ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಬೇಕಿದೆ ಎಂದು ಕರೆ ನೀಡಿದರು.
ಪ್ರಾಮಾಣಿಕ ರಾಜಕಾರಣ ಹಾಗೂ ಜನಪರ ಆಡಳಿತಕ್ಕಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಸಿ.ವಿ. ಸ್ಥಾವರಮಠ ಅವರ ಸೇರ್ಪಡೆ ಪಕ್ಷಕ್ಕೆ ಮತ್ತಷ್ಟು ಬಲ ನೀಡಲಿದೆ. ಅವರ ಅನುಭವ ಮತ್ತು ಅವರೊಂದಿಗೆ ಆಗಮಿಸಿರುವ ಮುಖಂಡರು ಹಾಗೂ ಕಾರ್ಯಕರ್ತರ ಸೇರ್ಪಡೆಯಿಂದ ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷದ ಸಂಘಟನೆ ಇನ್ನಷ್ಟು ಸದೃಢವಾಗಲಿದೆ ಎಂದು ಮುಖ್ಯ ಮಂತ್ರಿ ಚಂದ್ರು ಹೇಳಿದರು.
ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಸಿ.ವಿ. ಸ್ಥಾವರಮಠ, ಅರವಿಂದ್ ಕೇಜ್ರಿವಾಲ್ ಅವರ ವಿಚಾರಧಾರೆ ಮತ್ತು ಜನಪರ, ಪ್ರಾಮಾಣಿಕ ಆಡಳಿತದ ಸಾಧನೆ ಹಾಗೂ ಕಾರ್ಯವೈಖರಿಯನ್ನು ನಾನು ಹಲವು ವರ್ಷಗಳಿಂದ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಶಿಕ್ಷಣ, ಆರೋಗ್ಯ ಮತ್ತು ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡುವ ಮೂಲಕ ಸಾಮಾನ್ಯ ಪ್ರಜೆಗಳು ಸುಖವಾಗಿ, ಸಮೃದ್ಧವಾಗಿ ಬದುಕಲು ಸಾಧ್ಯ ಎಂಬುದನ್ನು ದೆಹಲಿಯಲ್ಲಿ ಹತ್ತು ವರ್ಷಗಳ ಕಾಲ ನಡೆದ ಆಡಳಿತದ ಮೂಲಕ ತೋರಿಸಿಕೊಟ್ಟಿರುವುದು ಮಹತ್ವದ ಸಾಧನೆ ಎಂದು ಹೇಳಿದರು.
ಅದೇ ರೀತಿ ಪಂಜಾಬ್ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನೇತೃತ್ವದಲ್ಲಿ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಪರಿವರ್ತನೆಗಳನ್ನು ತರಲಾಗಿದೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಪಂಜಾಬ್ ಸಾಧಿಸಿರುವ ಪ್ರಗತಿ ಅತ್ಯಂತ ಶ್ಲಾಘನೀಯವಾಗಿದೆ. ಜನಸಾಮಾನ್ಯನೊಬ್ಬ ಆಡಳಿತದ ಚುಕ್ಕಾಣಿ ಹಿಡಿದರೆ ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಸಾಧ್ಯ ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟಿವೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ರಾಜಕೀಯ ಹೋರಾಟಕ್ಕೆ ಇಂದಿನಿಂದ ಸಂಪೂರ್ಣವಾಗಿ ಧುಮುಕುತ್ತಿದ್ದೇವೆ. ಕರ್ನಾಟಕದಲ್ಲಿ ಮೌಲ್ಯಯುತ, ನೈತಿಕ, ಪಾರದರ್ಶಕ ಹಾಗೂ ಉತ್ತರದಾಯಿತ್ವದ ರಾಜಕಾರಣವನ್ನು ಸ್ಥಾಪಿಸಲು ನಾವೆಲ್ಲರೂ ಕಂಕಣಬದ್ಧರಾಗಿದ್ದೇವೆ ಎಂದು ಸಿ.ವಿ. ಸ್ಥಾವರಮಠ ತಿಳಿಸಿದರು.
ಸೇರ್ಪಡೆ ಸಮಾರಂಭದಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ, ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹವಾನಿ, ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ರಾಜ್ಯ ಸಂಘಟನಾ ಕಾರ್ಯದರ್ಶಿ ಗಳಾದ ಬಸವರಾಜ ಮುದಿಗೌಡರ, ಡಾ. ಸತೀಶ್ ಕುಮಾರ್, ಕಾರ್ಯದರ್ಶಿಗಳಾದ ಉಷಾ ಮೋಹನ್ ,ಜಗದೀಶ್ ಚಂದ್ರ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರುಗಳು ಭಾಗವಹಿಸಿದ್ದರು.
ಲೋಕ ಶಕ್ತಿ ಪಕ್ಷದಿಂದ ಸೇರ್ಪಡೆಗೊಂಡ ಪ್ರಮುಖ ಮುಖಂಡರು:
ಸಿ.ವಿ. ಸ್ಥಾವರಮಠ ಅವರೊಂದಿಗೆ ಬಸವರಾಜು ನೀರ್ಥಡಿ (ದಾವಣಗೆರೆ), ಸತೀಶ್ ಬಿ. ಗೋವಿಂದಪ್ಪ (ಬೆಂಗಳೂರು), ಎಲ್. ಮಹದೇವಯ್ಯ (ಚಾಮರಾಜನಗರ), ಧರ್ಮೇಂದ್ರ ಕೆ. (ವಿಜಯನಗರ ಜಿಲ್ಲೆ), ಯತೀಶ್ ಎಂ.ಎನ್. (ದಾಸರಹಳ್ಳಿ, ಬೆಂಗಳೂರು), ರಂಗನಾಥ್ ಆರ್.ಎಸ್. (ಮಧುಗಿರಿ, ತುಮಕೂರು), ಮಧುಸೂದನ್ (ದಾಸರಹಳ್ಳಿ, ಬೆಂಗಳೂರು), ಎಂ.ಎಸ್. ಶಿವಕುಮಾರ ಸ್ವಾಮಿ (ದಾವಣಗೆರೆ ಜಿಲ್ಲೆ), ಕೆ.ಡಿ. ನೀಲಕಂಠ (ಕೆ.ಆರ್. ನಗರ, ಮೈಸೂರು ಜಿಲ್ಲೆ), ಮಾರುತಿ ಪ್ರಸಾದ್ ಜಿ. (ಮೈಸೂರು ನಗರ) ಹಾಗೂ ಗೋಪಾಲ್ ಮಧುಗಿರಿ (ತುಮಕೂರು ಜಿಲ್ಲೆ) ಸೇರಿದಂತೆ ಹಲವು ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು.
