ಕೊಳ್ಳೇಗಾಲ: ಕೊಳ್ಳೇಗಾಲ ತಾಲ್ಲೂಕಿನ ಸುಪ್ರಸಿದ್ಧ ಶಿವನಸಮುದ್ರದ ಪ್ರವಾಸಿ ತಾಣಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡಬೇಕೆಂಬ ಕನಸು ನನ್ನದು ಎಂದು ಹನೂರು ಶಾಸಕ ಎಂ ಆರ್ ಮಂಜುನಾಥ್ ಅಭಿಲಾಷೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಹನೂರು ವಿಧಾನಸಭಾ ಕ್ಷೇತ್ರದ ಸತ್ತೇಗಾಲ ಗ್ರಾ. ಪಂ ವ್ಯಾಪ್ತಿಯ ಸುಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿ ಹಾಗೂ ಗಗನಚುಕ್ಕಿ ಜಲಪಾತದ ತಪ್ಪಲಿನಲ್ಲಿರುವ ಐತಿಹಾಸಿಕ ದರ್ಗಾದ ಅಭಿವೃದ್ಧಿಗೆ 1 ಕೋಟಿ ರೂ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಶಾಸಕರು ಮಾತನಾಡಿದರು.
ಶಿವನಸಮುದ್ರದ ಸಾಮೂಹಿಕ ದೇವಾಲಯ ಗಳಲ್ಲಿ ಒಂದಾದ ದರ್ಗಾ ಧಾರ್ಮಿಕ ನಂಬಿಕೆ ಹಾಗೂ ಸರ್ವಧರ್ಮಗಳ ಭಾವೈಕ್ಯತೆಯ ಪ್ರತೀಕವಾಗಿದೆ. ಸುಮಾರು 800 ವರ್ಷಗಳ ಇತಿಹಾಸವುಳ್ಳ ಕ್ಷೇತ್ರದಲ್ಲಿ ಮುಸ್ಲಿಂ ಸಂತ ಮರ್ದಾನೆಗೈಬ್ ಅವರು ಐಕ್ಯರಾಗಿದ್ದು ಇಲ್ಲಿಗೆ ಭೇಟಿ ನೀಡಿದರೆ ಒಳಿತಾಗಲಿದೆ ಎಂಬ ನಂಬಿಕೆಯಿಂದ ಜಿಲ್ಲೆ ಹಾಗೂ ರಾಜ್ಯದ ಎಲ್ಲಾ ಕಡೆಯಿಂದಲೂ ಭಕ್ತರು ಬರುತ್ತಾರೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಚಿಂತಾಮಣಿ ಸೇರಿದಂತೆ ಇತರ ಕಡೆಯಿಂದ ಎಲ್ಲಿಗೆ ಬಸ್ ಸೌಲಭ್ಯವಿದೆ. ಇಂತಹ ಐತಿಹಾಸಿಕ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿ ಹಾಗೂ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಶಾಸಕರು ತಿಳಿಸಿದರು.
ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಕೈಗೊಳ್ಳಲು ಇಂದು ಗುದ್ದಲಿ ಪೂಜೆ ಮಾಡಲಾಗಿದೆ. ದರ್ಗಾಕ್ಕೆ ಆಗಮಿಸುವ ಭಕ್ತರು ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಸಿಸಿ ರಸ್ತೆ, ಚರಂಡಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಂಬಂಧಪಟ್ಟ ಇಂಜಿನಿಯರ್ಗಳಿಗೆ ಸೂಚಿಸಲಾಗಿದೆ ಎಂದು ಮಂಜುನಾಥ್ ಹೇಳಿದರು.
ರಸ್ತೆ ಮತ್ತು ಚರಂಡಿ ಕಾಮಗಾರಿಗೆ ವಿಶೇಷ ಅನುದಾನದಲ್ಲಿ ಸುಮಾರು 1 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಶೌಚಾಲಯ ನಿರ್ಮಾಣಕ್ಕೆ ಪ್ರತ್ಯೇಕ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ಅಲ್ಲದೆ ಈ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 75 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅನುದಾನದಲ್ಲಿ ಉಳಿದ ಹಣವನ್ನು ಬಳಸಿ ಈ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಉಳಿತಾಯ ಅನುದಾನದಿಂದ ದರ್ಗಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯೂ ನಡೆಯುತ್ತಿದೆ. ಇನ್ನು ವಕ್ಫ್ ಬೋರ್ಡ್ನಿಂದ ದರ್ಗಾ ಅಭಿವೃದ್ಧಿಗಾಗಿ 8.5 ಕೋಟಿ ಅನುದಾನ ಕಾಯ್ದಿರಿಸಿರುವ ಬಗ್ಗೆ ಮಾಹಿತಿ ಇದೆ ಎಂದು ತಿಳಿಸಿದರು.
ಈ ಹಿಂದೆ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಭೇಟಿಯಾಗಿ ಅಭಿವೃದ್ಧಿಗೆ ಮನವಿ ಸಲ್ಲಿಸಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಂಗಡಿ ಮಾಲೀಕರ ಸಮಸ್ಯೆಗಳನ್ನು ಬಗೆಹರಿಸಿದ ಬಳಿಕ ಫುಡ್ ಕೋರ್ಟ್ ಮಾದರಿಯಲ್ಲಿ ಶಾಶ್ವತ ವ್ಯವಸ್ಥೆ ಕಲ್ಪಿಸಿ, ದರ್ಗಾ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮುಂದಿನ ಮೂರುರಿಂದ ಆರು ತಿಂಗಳ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಪ್ರಸ್ತುತ ದರ್ಗಾಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಮೊದಲ ಆದ್ಯತೆಯಾಗಿದೆ. ಆರಂಭಿಸಿರುವ ಕಾಮಗಾರಿಗಳ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿ, ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಈ ಸಂದರ್ಭದಲ್ಲಿ ಸತ್ತೇಗಾಲ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ನಂಜುಂಡ, ಗ್ರಾ.ಪಂ ಮಾಜಿ ಅಧ್ಯಕ್ಷ ಮಲ್ಲೇಶ್, ಮುಖಂಡರಾದ ಪ್ರಭುಸ್ವಾಮಿ,, ನಾಗರಾಜು, ಹ್ಯಾಂಡ್ ಪೋಸ್ಟ್ ಮಹದೇವು, ಸಿಂಗನಲ್ಲೂರ್ ರಾಜಣ್ಣ, ಪನ್ನಾಡಿ, ಡಿ.ಕೆ ರಾಜು, ಸರಗೂರು ಪ್ರಕಾಶ್, ಶಾಂತರಾಜು, ವಿನ್ಸೆಂಟ್, ಜಮೀರ್, ರಾಹುಲಯ್ಯ,ಲೂರ್ದ್ ಸ್ವಾಮಿ, ಅಲ್ತಾಫ್ ಹುಸೇನಿ, ಸಯದ್ ಹುಸೇನಿ, ಯೂಸೂಫ್ ಹುಸೇನಿ, ವಕ್ಫ್ ಬೋರ್ಡ್ ಸೂಪರ್ ವೈಸರ್ ಜಕಾವುಲ್ಲಾ,ಲೋಕೋಪಯೋಗಿ
ಇಲಾಖೆಯ ಎಇಇ ಕುಮಾರ್,ಎಇ ಮಂಜು,ಇಂಜಿನಿಯರ್ ರಂಗನಾಥ್, ವೆಂಕಟಾಚಲ ಮತ್ತಿತರರು ಹಾಜರಿದ್ದರು.
