ಮೈಸೂರು: ಆಡಳಿತ ಪಕ್ಷವಾದ ಕಾಂಗ್ರೆಸ್ ಅನ್ನು ಬೈದುಕೊಂಡು ತಿರುಗಾಡುವುದೇ ವಿಪಕ್ಷದ ಕಾರ್ಯ ಎಂದು ಪೌರಾಡಳಿತ ಖಾತೆ ಸಚಿವ ಬಾಲಕೃಷ್ಣ ಟೀಕಿಸಿದರು.
ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿ ಗಾರರೊಂದಿಗೆ ಮಾತನಾಡಿದ ಸಚಿವರು, ವಿಪಕ್ಷವಾದ ಬಿಜೆಪಿಗೆ ಮಾಡಲು ಕೆಲಸವಿಲ್ಲ ಹಾಗಾಗಿ ಅವರು ಆಡಳಿತ ಪಕ್ಷವಾದ ಕಾಂಗ್ರೆಸ್ಸನ್ನು ಟೀಕೆ ಮಾಡುತ್ತಾ ಓಡಾಡುತ್ತಾರೆ ಎಂದು ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಹೊಸ ಬಾಂಬ್ ಸಿಡಿಸಲಿದ್ದಾರಂತೆ ಎಂಬ ಪ್ರಶ್ನೆಗೆ, ಕುಮಾರಸ್ವಾಮಿಯವರು ಕೇಂದ್ರದಿಂದ ಮಹದಾಯಿ, ಮೇಕೆದಾಟು ಯೋಜನೆಗೆ ಒಪ್ಪಿಗೆ ತಂದಿದ್ದಾರಲ್ಲ ಎಂದು ಮಾರ್ಮಿಕವಾಗಿ ಹೇಳಿದರಲ್ಲದೆ ಇದೆ ಅವರ ಹೊಸ ಬಾಂಬು ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಆದೇಶದ ಮೇರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಗುವುದು ಎಂದು ಬಾಲಕೃಷ್ಣ ತಿಳಿಸಿದರು.
ಮೊದಲ ಸಭೆಯನ್ನು ಇಂದು ಮೈಸೂರಿನಲ್ಲಿ ನಡೆಸಿ ಆನಂತರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಭೆ ನಡೆಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಜಿಲ್ಲೆಯ ಪ್ರತೀ ನಗರಸಭೆ, ಪುರಸಭೆಗೆ ಮೂಲಭೂತ ಸೌಕರ್ಯ ಒದಗಿಸುವ ಹಿನ್ನೆಲೆಯಲ್ಲಿ ಈ ಸಭೆಯನ್ನು ನಡೆಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
ನಾಗೇಂದ್ರ ಅವರ ರಾಜೀನಾಮೆಯಿಂದ ಪಕ್ಷಕ್ಕೆ ಮುಜುಗರ ಆಗಿಲ್ಲವೇ ಎಂಬ ಪ್ರಶ್ನೆಗೆ, ಯಾರ ಮೇಲೆ ಆರೋಪ ಇಲ್ಲಾ, ಅವರು ಆರೋಪಿಯಷ್ಟೇ ಅಪರಾಧಿ ಅಲ್ಲ ಎಂದು ತಿಳಿಸಿದರು.
