ಮೈಸೂರು: ದಸರಾ ಗಜಪಡೆಯ ಎರಡನೇ ಹಂತದ ಕುಶಾಲತೋಪು ತಾಲೀಮು ಯಶಸ್ವಿಯಾಗಿದೆ. ಯಾವುದೇ ಆನೆಗಳು ಗುಂಡಿನ ಸದ್ದಿಗೆ ಬೆದರಿಲ್ಲ. ಎಲ್ಲಾ ಆನೆಗಳು ಸದ್ದಿಗೆ ಹೊಂದಿಕೊಂಡಿದ್ದು, ಆನೆಗಳ ಆರೋಗ್ಯ ಉತ್ತಮವಾಗಿದೆ ಎಂದು ಡಿಸಿಎಫ್ ಡಾ. ಪ್ರಭುಗೌಡ ತಿಳಿಸಿದ್ದಾರೆ.
ತಾಲೀಮಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಹೇಂದ್ರ ಆನೆ ಭಾರ ಹೊರಲು ಹಿಂದೇಟು ಹಾಕುತ್ತಿದೆ. ಈ ಹಿಂದೆ ನಾಲ್ಕು ಬಾರಿ ಶ್ರೀರಂಗಪಟ್ಟಣ ದಸರಾದಲ್ಲಿ ಭಾಗವಹಿಸಿದ್ದಾನೆ. ಸದ್ಯ ಆತನಿಗೆ ಭಾರ ಹೊರಲು ಸಾಧ್ಯವಾಗುತ್ತಿಲ್ಲ,ಆದ್ದರಿಂದ ಆತನನ್ನು ಅಂಬಾರಿ ಹೊರಲು ಪರಿಗಣಿಸಲಾಗದು ಎಂದು ಸ್ಪಷ್ಟಪಡಿಸಿದರು.
ಇನ್ನೆರಡು ದಿನಗಳಲ್ಲಿ ಶ್ರೀರಂಗಪಟ್ಟಣ ದಸರಾದಲ್ಲಿ ಭಾಗವಹಿಸುವ ಆನೆಯನ್ನು ಫೈನಲ್ ಮಾಡುತ್ತೇವೆ ಎಂದು ತಿಳಿಸಿದರು.
ಸದ್ಯ ಅಂಬಾರಿ ಹೊರುವ ರೇಸ್ನಲ್ಲಿ ಧನಂಜಯ, ಪ್ರಶಾಂತ, ಸುಗ್ರೀವಾ ಮತ್ತು ಏಕಲವ್ಯ ಆನೆಗಳು ಇವೆ. ಈ ನಾಲ್ಕರಲ್ಲಿ ಒಂದು ಆನೆಯನ್ನು ಅಂಬಾರಿ ಹೊರುವ ಆನೆಯಾಗಿ ಅಂತಿಮಗೊಳಿಸಲಾಗುವುದು, ಎಂದು ಪ್ರಭುಗೌಡ ತಿಳಿಸಿದರು.
