ಬೆಂಗಳೂರು: ಗಂಭೀರ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಅವರ ಸಂಪುಟ ಸೇರ್ಪಡೆ ಹಿಂಪಡೆಯಲು ಸಿಎಂ ಗೆ ಸೂಚಿಸಬೇಕೆಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರು ಮನವಿ ಮಾಡಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಸಾರ್ವಜನಿಕ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಮರು ಸೇರ್ಪಡೆ ಮಾಡಿರುವುದಕ್ಕೆ ಅಶೋಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಕ್ಷಣ ಮಧ್ಯಪ್ರವೇಶಿಸಿ ಮುಖ್ಯಮಂತ್ರಿಗೆ ನಾಗೇಂದ್ರ ಅವರ ಸಂಪುಟ ಸೇರ್ಪಡೆ ಹಿಂಪಡೆಯುವಂತೆ ಸೂಚಿಸಬೇಕೆಂದು ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.
ಇದು ಕೇವಲ ಕಾನೂನುಬದ್ಧ ಅರ್ಹತೆಯ ಪ್ರಶ್ನೆಯಲ್ಲ; ಸಂವಿಧಾನಾತ್ಮಕ ಔಚಿತ್ಯ, ಸಾರ್ವಜನಿಕ ಜೀವನದಲ್ಲಿನ ಪ್ರಾಮಾಣಿಕತೆ ಮತ್ತು ಜನರ ವಿಶ್ವಾಸದ ಪ್ರಶ್ನೆ ಎಂದು ಹೇಳಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಸಾರ್ವಜನಿಕ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನಿಖೆ ಮುಂದುವರಿದಿದ್ದು, ಸಿಬಿಐ ಚಾರ್ಜ್ಶೀಟ್ ಸಲ್ಲಿಸಿದೆ. ಪ್ರಕರಣದಲ್ಲಿ ಸುಮಾರು 89.63 ಕೋಟಿ ಸಾರ್ವಜನಿಕ ಹಣದ ಅಕ್ರಮ ವರ್ಗಾವಣೆ ನಡೆದಿರುವ ಬಗ್ಗೆ ತನಿಖಾ ಸಂಸ್ಥೆ ಆರೋಪಗಳನ್ನು ದಾಖಲಿಸಿದೆ. ಈ ಪ್ರಕರಣದಲ್ಲಿ ಬಿ. ನಾಗೇಂದ್ರ ಅವರನ್ನು ಆರೋಪಿಯಾಗಿ ಹೆಸರಿಸಲಾಗಿದ್ದು, ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸೇರಿದಂತೆ ಇತರ ಸಂಸ್ಥೆಗಳ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳೂ ಮುಂದುವರಿದಿವೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.
ಬಿ. ನಾಗೇಂದ್ರ ಅವರು ಈ ಪ್ರಕರಣಕ್ಕೆ ಸಂಬಂಧಿಸಿದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಅಂದಿನ ಪರಿಸ್ಥಿತಿಯಲ್ಲಿ ರಾಜೀನಾಮೆ ನೀಡುವಷ್ಟು ಗಂಭೀರವಾಗಿದ್ದ ಆರೋಪಗಳು ಇಂದು ಏನು ಬದಲಾಗಿವೆ ಎಂಬ ಮೂಲಭೂತ ಪ್ರಶ್ನೆಯನ್ನು ಆರ್. ಅಶೋಕ್ ಮುಂದಿಟ್ಟಿದ್ದಾರೆ.
ಆರೋಪಗಳು ಕೊನೆಗೊಂಡಿಲ್ಲ. ಪ್ರಕರಣ ಮುಚ್ಚಲ್ಪಟ್ಟಿಲ್ಲ. ಯಾವುದೇ ಖುಲಾಸೆ ಆಗಿಲ್ಲ. ಬದಲಾಗಿ ತನಿಖೆ ಮುಂದುವರಿದು ಚಾರ್ಜ್ಶೀಟ್ ಸಲ್ಲಿಕೆಯ ಹಂತಕ್ಕೆ ತಲುಪಿದೆ. ಇಂತಹ ಸಂದರ್ಭದಲ್ಲಿ ಅದೇ ವ್ಯಕ್ತಿಯನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವುದಕ್ಕೆ ಸರ್ಕಾರದ ಬಳಿ ಯಾವ ನೈತಿಕ ಸಮರ್ಥನೆ ಇದೆ ಎಂದು ಅವರು ಪ್ರಶ್ನಿಸಿದ್ದಾರೆ.
ಸಚಿವರ ನೇಮಕಕ್ಕೆ ಸಂಬಂಧಿಸಿದ ಸಂವಿಧಾನಾತ್ಮಕ ಮಾನದಂಡಗಳನ್ನು ಚರ್ಚಿಸಿರುವ ಸುಪ್ರೀಂ ಕೋರ್ಟ್ ‘ಮನೋಜ್ ನರುಲಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ’ (2014) ತೀರ್ಪನ್ನು ಆರ್. ಅಶೋಕ್ ಅವರು ರಾಜ್ಯಪಾಲರ ಗಮನಕ್ಕೆ ತಂದಿದ್ದಾರೆ.
ಕ್ರಿಮಿನಲ್ ಪ್ರಕರಣ ಬಾಕಿಯಿದೆ ಎಂಬ ಒಂದೇ ಕಾರಣಕ್ಕೆ ವ್ಯಕ್ತಿಯೊಬ್ಬರು ಕಾನೂನುಬದ್ಧವಾಗಿ ಸಚಿವರಾಗಲು ಅನರ್ಹರಾಗುವುದಿಲ್ಲ ಎಂಬ ತತ್ವವನ್ನು ಸುಪ್ರೀಂ ಕೋರ್ಟ್ ಗುರುತಿಸಿದ್ದರೂ, ಸಂವಿಧಾನಾತ್ಮಕ ನೈತಿಕತೆ, ಉತ್ತಮ ಆಡಳಿತ, ಸಾರ್ವಜನಿಕ ಜೀವನದಲ್ಲಿನ ಪ್ರಾಮಾಣಿಕತೆ ಮತ್ತು ಜನರ ವಿಶ್ವಾಸವನ್ನು ಕಾಪಾಡುವ ಜವಾಬ್ದಾರಿ ಮುಖ್ಯಮಂತ್ರಿಗೆ ಇದೆ ಎಂಬುದನ್ನು ತೀರ್ಪು ಒತ್ತಿಹೇಳುತ್ತದೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.
ಸಂವಿಧಾನಾತ್ಮಕ ಔಚಿತ್ಯ ಮತ್ತು ಸಾರ್ವಜನಿಕ ನಂಬಿಕೆಯನ್ನು ಕಾಪಾಡುವ ನೈತಿಕ ಜವಾಬ್ದಾರಿ ಬೇರೆ. ಅಪರಾಧ ಪ್ರಕರಣದಲ್ಲಿ ಅಂತಿಮ ತೀರ್ಪು ನೀಡುವುದು ನ್ಯಾಯಾಲಯದ ಕೆಲಸ. ಆದರೆ ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಬೇಕು ಎಂಬುದು ಮುಖ್ಯಮಂತ್ರಿಯ ಸಂವಿಧಾನಾತ್ಮಕ ಮತ್ತು ನೈತಿಕ ಜವಾಬ್ದಾರಿಯ ಪ್ರಶ್ನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಂವಿಧಾನದ ವಿಧಿ 164ರ ಅಡಿಯಲ್ಲಿ ರಾಜ್ಯಪಾಲರು ಮುಖ್ಯಮಂತ್ರಿಯ ಸಲಹೆಯ ಮೇರೆಗೆ ಸಚಿವರನ್ನು ನೇಮಕ ಮಾಡುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಗೌರವಿಸುವುದಾಗಿ ತಿಳಿಸಿರುವ ಆರ್. ಅಶೋಕ್, ತಮ್ಮ ಮನವಿ ಯಾವುದೇ ರೀತಿಯಲ್ಲಿ ಚುನಾಯಿತ ಸರ್ಕಾರದ ಸಂವಿಧಾನಾತ್ಮಕ ವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬದಲಾಗಿ, ವಿಧಿ 167ರ ಅಡಿಯಲ್ಲಿ ಮುಖ್ಯಮಂತ್ರಿಯಿಂದ ಅಗತ್ಯ ಮಾಹಿತಿಯನ್ನು ಪಡೆದು, ಬಿ. ನಾಗೇಂದ್ರ ವಿರುದ್ಧದ ಸಿಬಿಐ, ಲೋಕಾಯುಕ್ತ ಹಾಗೂ ಇತರ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳ ಪ್ರಸ್ತುತ ಸ್ಥಿತಿ ಏನು, ಇಂತಹ ಪರಿಸ್ಥಿತಿಯಲ್ಲಿಯೇ ಅವರನ್ನು ಮತ್ತೆ ಸಚಿವರನ್ನಾಗಿ ನೇಮಿಸಲು ಕಾರಣವಾದ ಅಂಶಗಳು ಯಾವುವು ಎಂಬುದನ್ನು ರಾಜ್ಯಪಾಲರು ಪರಿಶೀಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿ. ನಾಗೇಂದ್ರ ಅವರ ಸಚಿವ ಸಂಪುಟ ಸೇರ್ಪಡೆಯನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ರಾಜ್ಯಪಾಲರು ಈ ವಿಚಾರದಲ್ಲಿ ತಮ್ಮ ಸಂವಿಧಾನಾತ್ಮಕ ವ್ಯಾಪ್ತಿಯೊಳಗೆ ಅಗತ್ಯ ಮಧ್ಯಪ್ರವೇಶ ಮಾಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
