(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ತಾಲ್ಲೂಕಿನ ಸುಪ್ರಸಿದ್ಧ ಚಿಕ್ಕಲೂರು ಮುಖ್ಯರಸ್ತೆಯ 2 ಸೇತುವೆಗಳ ನಿರ್ಮಾಣ ಕಾಮಗಾರಿಗೆ ಸುಮಾರು 5.5 ಕೋಟಿ ರೂ. ವೆಚ್ಚದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು.
ಹನೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗಗಳ ಮೂಲಸೌಕರ್ಯ ಬಲಪಡಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು ಲೋಕೋಪಯೋಗಿ ಇಲಾಖೆಯ ವತಿಯಿಂದ ಕ್ಷೇತ್ರ ವ್ಯಾಪ್ತಿಯ ಚಿಕ್ಕಲೂರು ಮುಖ್ಯರಸ್ತೆಯ ಗೋನಾಲ್ ಬಸವೇಶ್ವರ ದೇವಸ್ಥಾನದ ಬಳಿ ಸೇತುವೆ 2 ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಹಾಗೂ ಕೊತ್ತನೂರು ಗ್ರಾಮದ ಜಿ.ವಿ. ಗೌಡ ಶಾಲೆ ಸಮೀಪ 3.5 ಕೋಟಿ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ, ಸೇರಿದಂತೆ ಒಟ್ಟು 5.5 ಕೋಟಿ ರೂ. ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಎಂ.ಆರ್. ಮಂಜುನಾಥ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಹುದಿನಗಳಿಂದ ಈ ಭಾಗದ ಜನರು ಎದುರಿಸುತ್ತಿದ್ದ ಸಂಚಾರದ ಸಮಸ್ಯೆಗಳಿಗೆ ಸೇತುವೆಗಳ ಅಭಿವೃದ್ಧಿ ಪರಿಹಾರ ಒದಗಿಸಲಿದ್ದು, ಮಳೆಗಾಲದಲ್ಲಿ ನೀರು ಹರಿದು ರಸ್ತೆ ಸಂಪರ್ಕ ಕಡಿತಗೊಳ್ಳುವಂತಹ ಪರಿಸ್ಥಿತಿಯನ್ನು ತಪ್ಪಿಸಲು ಸಹಕಾರಿಯಾಗಲಿದೆ. ಈ ಸೇತುವೆಗಳ ನಿರ್ಮಾಣದಿಂದ ಈ ಭಾಗದ ಸುತ್ತಮುತ್ತಲಿನ ಗ್ರಾಮಗಳ ಜನರು, ವಿದ್ಯಾರ್ಥಿಗಳು, ರೈತರು ಹಾಗೂ ವಾಹನ ಸವಾರರಿಗೆ ಸುಗಮ, ಸುರಕ್ಷಿತ ಹಾಗೂ ನಿರಂತರ ಸಂಚಾರ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಗೋನಾಲ್ ಬಸವೇಶ್ವರ ದೇವಸ್ಥಾನದ ಬಳಿ 5 ಮೀಟರ್ ಉದ್ದ 8 ಮೀಟರ್
ಅಗಲ ಹಾಗೂ 6 ಮೀಟರ್ ಎತ್ತರದ ಸೇತುವೆ ಹಾಗೂ ಕೊತ್ತನೂರು ಗ್ರಾಮದ ಜಿ.ವಿ. ಗೌಡ ಶಾಲೆ ಸಮೀಪ 7 ಮೀಟರ್ ಅಗಲ ಹಾಗೂ ಮೀಟರ್ 6 ಎತ್ತರದ ಸೇತುವೆ ನಿರ್ಮಾಣವಾಗಲಿದೆ ಆದಷ್ಟು ಬೇಗ ಲೋಕಾರ್ಪಣೆ ಯಾಗಬೇಕು ಎಂದು ಶಾಸಕರು ತಿಳಿಸಿದರು.
ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಅಗತ್ಯವಿರುವ ಮೂಲಸೌಕರ್ಯ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಜನರ ದೈನಂದಿನ ಬದುಕಿಗೆ ನೇರವಾಗಿ ಅನುಕೂಲವಾಗುವ ರಸ್ತೆ, ಸೇತುವೆ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ.
ನಿನ್ನೆಯು ಸಹ ಹೂಗ್ಯಂ, ಹಾಗೂ ನಲ್ಲೂರು ಗ್ರಾಮದ ಬಳಿ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ 2 ಸೇತುವೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ, ಇದಕ್ಕಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಏಕೆಂದರೆ ನಾನು ಕ್ಷೇತ್ರ ದೊಡ್ಡದೆಂದು ಕೇಳಿದಾಗ ಇಷ್ಟು ಸೇತುವೆಗಳನ್ನು ಹಾಗೂ ಅವರೇ ಸ್ವತಃ ಹೊಗೇನಕಲ್ ಬ್ರಿಡ್ಜ್ ಗೆ 50 ಕೋಟಿಗೆ ಅವಕಾಶ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಕುಮಾರ್, ನಾಗರಾಜು, ಭದ್ರ, ಲೋಕೇಶ್, ಷಣ್ಮುಖ, ಮಹೇಶ್, ಮಹದೇವಸ್ವಾಮಿ, ಪಾಪಣ್ಣ, ಮಲಯಪ್ಪ, ನಾಗಣ್ಣ, ಬಸವರಾಜು, ರಾಜಗೋಪಾಲ್, ಮಂಜೇಶ್ ಗೌಡ, ಮಣಿ, ಗೋವಿಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
