ನವದೆಹಲಿ: ದೆಹಲಿಯ ಸತ್ಯ ನಿಕೇತನದಲ್ಲಿ ಭಾನುವಾರ ಆರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು,ಮೂವರು ಮೃತತಪಟ್ಟಿದ್ದು,ಇಲ್ಲಿಯತನಕ 11 ಮಂದಿಯನ್ನು ಕಟ್ಟಡದ ಅವಶೇಷಗಳಿಂದ ಹೊರತರಲಾಗಿದೆ.
30ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರಬಹುದೆಂದು ಶಂಕಿಸಲಾಗಿದ್ದು ಎನ್ ಡಿ ಆರ್ ಎಫ್ ಟಂಡ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ಸುಮಾರು 75 ಹಾಸಿಗೆಗಳ ಪೇಯಿಂಗ್ ಗೆಸ್ಟ್ (PG) ವಸತಿ ಸೌಲಭ್ಯವಾಗಿ ಬಳಸಲಾಗುತ್ತಿದ್ದ ಕಟ್ಟಡವು ಮಧ್ಯಾಹ್ನ ಸುಮಾರು 1.30ಕ್ಕೆ ಕುಸಿದಿದೆ. ಕಟ್ಟಡದ ಮಾಲೀಕರು ಗುರುಗ್ರಾಮ್ನಲ್ಲಿ ವಾಸಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್ ಸಮೀಪದಲ್ಲಿರುವ ಸತ್ಯ ನಿಕೇತನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಾಸಿಸುತ್ತಾರೆ.
ಕುಸಿತವಾದ ಕಟ್ಟಡವು 40ರಿಂದ 50 ವರ್ಷ ಹಳೆಯದಾಗಿದ್ದು, ನೆಲಮಾಳಿಗೆ ಹಾಗೂ ಮೇಲ್ಭಾಗದಲ್ಲಿ ಐದು ಅಂತಸ್ತುಗಳನ್ನು ಹೊಂದಿತ್ತು ಎಂಬುದು ತಿಳಿದುಬಂದಿದೆ.ಪಿಜಿ ಕಟ್ಟಡದ ನೆಲಮಾಳಿಗೆಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಭಾನುವಾರವಾದ್ದರಿಂದ ವಿದ್ಯಾರ್ಥಿಗಳು ತಮ್ಮ ಕೊಠಡಿಗಳಲ್ಲೇ ಇದ್ದರು.
ಕಟ್ಟಡ ಕುಸಿದ ವೇಳೆ ಸುಮಾರು 50 ವಿದ್ಯಾರ್ಥಿಗಳು ಕಟ್ಟಡದೊಳಗಿದ್ದರು.ಹಾಗಾಗಿ ಸಾವಿನ ಸಂಖ್ಯೆ ಹೆಚ್ಚಾಗಬಹುದು.
ಜನದಟ್ಟಣೆಯನ್ನು ನಿಯಂತ್ರಿಸಲು ಗಲಭೆ ನಿಯಂತ್ರಣ ತಂಡಗಳನ್ನೂ ಕರೆಸಲಾಗಿದೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಕಟ್ಟಡ ಕುಸಿತದ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟಡದ ಪಕ್ಕದಲ್ಲಿರುವ ಮತ್ತೊಂದು ಕಟ್ಟಡವನ್ನು ಖಾಲಿ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ.
