ಫಿಲಡೆಲ್ಫಿಯಾ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಆರ್ಥಿಕತೆ ಸದೃಢವಾಗಿ ಏರುಗತಿಯಲ್ಲಿ ಮುಂದುವರೆದಿದ್ದು, ಬಂಡವಾಳ ಹೂಡಿಕೆಗೆ ಅತ್ಯುತ್ತಮ ವಾತಾವರಣವಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.
ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆಯುತ್ತಿರುವ ಅಕ್ಕ ರಜತ ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿದ್ದ ‘ಬಿಸಿನೆಸ್ ಫೋರಮ್–2026’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತವು ಉದ್ಯಮಶೀಲತೆ, ತಂತ್ರಜ್ಞಾನ ಮತ್ತು ನವೋದ್ಯಮ ಕ್ಷೇತ್ರಗಳಲ್ಲಿ ನಾಗಾಲೋಟದಲ್ಲಿ ಮುಂದುವರೆದಿದ್ದು, ಭಾರತ ಸರಕಾರವು ಉದ್ಯಮಿಗಳು ಹಾಗೂ ಯುವಜನರಿಗೆ ಹಲವು ರೀತಿಯ ಸವಲತ್ತುಗಳು ಮತ್ತು ಅವಕಾಶಗಳನ್ನು ಒದಗಿಸುತ್ತಿದೆ. ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಸೇರಿದಂತೆ ಭಾರತೀಯರು ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಭಾರತದಲ್ಲಿ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು ಎಂದು ಕರೆ ನೀಡಿದರು.
ನಿಮ್ಮ ತಾಂತ್ರಿಕ ಜ್ಞಾನ ಮತ್ತು ಅನುಭವವನ್ನು ಭಾರತದಲ್ಲಿ ಉದ್ಯಮ ಕಟ್ಟಲು ಬಳಸಿಕೊಳ್ಳಿ. ಕೇವಲ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ನೀಡುವ ಉದ್ಯಮಿಗಳಾಗಿ ಎಂದು ಕುಮಾರಸ್ವಾಮಿ ಅವರು ಹೇಳಿದರು.
ವಿಶೇಷವಾಗಿ ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ತಂತ್ರಜ್ಞಾನ, ಕೈಗಾರಿಕೆ, ಉದ್ಯಮ ಹಾಗೂ ವೃತ್ತಿಪರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ತಮ್ಮ ಜ್ಞಾನ ಮತ್ತು ಅನುಭವವನ್ನು ಭಾರತದೊಂದಿಗೆ ಹಂಚಿಕೊಳ್ಳುವ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಬಹುದು ಎಂದು ಹೆಚ್ ಡಿ ಕೆ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ವಿಕಸಿತ ಭಾರತ ಕನಸನ್ನು 2047ರ ಸಾಧಿಸಲು ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳ ಮೂಲಕ ಮುನ್ನುಗ್ಗುತ್ತಿದೆ ಎಂದು ಸಚಿವರು ಹೇಳಿದರು.
ರಾಷ್ಟ್ರದಲ್ಲಿ ಮಾಲಿನ್ಯಮುಕ್ತ ಸಾರಿಗೆಗೆ ಒತ್ತು ನೀಡುವ ಉದ್ದೇಶದಿಂದ 10,900 ಕೋಟಿ ಬೃಹತ್ ಮೊತ್ತದ ಪಿಎಂಇ ಡ್ರೈವ್ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಇವತ್ತು ನಮ್ಮ ರಸ್ತೆಗಳ ಮೇಲೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ಟ್ರಕ್ ಗಳು ಬಸ್ಸುಗಳು ಯಥೇಚ್ಛವಾಗಿ ಸಂಚರಿಸುತ್ತಿವೆ ಎಂದು ಸಚಿವರು ಹೇಳಿದರು.
ಉಕ್ಕು ಕ್ಷೇತ್ರದಲ್ಲಿ ಭಾರತವು ಹಿಂದೆಂದೂ ಕಂಡಿರದಷ್ಟು ದೃಢವಾದ ಅಭಿವೃದ್ಧಿಯನ್ನು ಸಾಧಿಸುತ್ತಿದೆ. 2030ರ ವೇಳೆಗೆ ಭಾರತವು ದೇಶಿಯವಾಗಿ 300 ದಶಲಕ್ಷ ಟನ್ ಉಕ್ಕನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. 2070ರ ಹೊತ್ತಿಗೆ ಉಕ್ಕು ಉತ್ಪಾದನೆಯಲ್ಲಿ ಇಂಗಾಲ ಹೊರಸುವಿಕೆಯನ್ನು ಶೂನ್ಯಮಟ್ಟಕ್ಕೆ ತರುವ ಗುರಿ ಹೊಂದಲಾಗಿದೆ. ದೇಶಿಯವಾಗಿ ಉಕ್ಕು ಉತ್ಪಾದನೆಗೆ ಶಕ್ತಿ ತುಂಬ ಉದ್ದೇಶದಿಂದ 6,322 ಮೊತ್ತದ ಉತ್ಪಾದನಾ ಉತ್ತೇಜನ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ ಎಂದು ಸಚಿವರು ವಿವರಿಸಿದರು.
ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು ,ಅಕ್ಕ ಕೂಟದ ಪ್ರಮುಖರಾದ ಅಮರನಾಥ ಗೌಡ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಅಕ್ಕ ಅಧ್ಯಕ್ಷ ಮಧು ರಂಗಯ್ಯ ಹಾಗೂ ಅಮೆರಿಕದಲ್ಲಿರುವ ಭಾರತದ ಡೆಪ್ಯುಟಿ ಕಾನ್ಸುಲೇಟ್ ಜನರಲ್ ವಿಶಾಲ್ ಹರ್ಷ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
