ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಎಂಡಿಎ) 50:50 ಬದಲಿ ನಿವೇಶನ ಹಂಚಿಕೆ ರದ್ದುಪಡಿಸಿ ಮಹತ್ವದ ಆದೇಶ ಹೊರಡಿಸಲಾಗಿದೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಮಾಡಲಾಗಿರುವ 50:50 ಬದಲಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ, ಉನ್ನತ ಮಟ್ಟದ ತಾಂತ್ರಿಕ ಸಮಿತಿಯು ನೀಡಿರುವ ವರದಿಯನ್ವಯ ತಕ್ಷಣದಿಂದ ಜಾರಿಗೆ ಬರುವಂತೆ 2023ರ ಮಾರ್ಚ್ 14ರ ನಿರ್ದೇಶನವನ್ನು ಉಲ್ಲಂಘಿಸಿ ಮಾಡಲಾದ ಎಲ್ಲಾ 50:50 ಬದಲಿ ನಿವೇಶನಗಳ ಹಂಚಿಕೆಯನ್ನು ರದ್ದುಪಡಿಸಿ ಆದೇಶಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
14-3-2023 ರ ನಿರ್ದೇಶನಗಳನ್ನು ಉಲ್ಲಂಘಿಸಿ ಹಂಚಿಕೆ ಮಾಡಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು/ಜಿಲ್ಲಾಧಿಕಾರಿಗಳು, ಆಯುಕ್ತರು ಹಾಗೂ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಪ್ರಮುಖ ನಿರ್ದೇಶನಗಳನ್ನು ನೀಡಲಾಗಿದೆ.
ದಿನಾಂಕ 14-03-2023ರ ಸರ್ಕಾರದ ನಿರ್ದೇಶನವನ್ನು ಉಲ್ಲಂಘಿಸಿ ಮಾಡಲಾಗಿರುವ ಎಲ್ಲಾ 50:50 ಬದಲಿ ನಿವೇಶನ ಹಂಚಿಕೆ ಆದೇಶಗಳನ್ನು ತಕ್ಷಣವೇ ರದ್ದುಪಡಿಸಬೇಕು.
ನಿಯಮ ಉಲ್ಲಂಘಿಸಿ ಈಗಾಗಲೇ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿರುವ ಬದಲಿ ನಿವೇಶನಗಳ ‘ಕ್ರಯಪತ್ರ’ಗಳನ್ನು ರದ್ದುಪಡಿಸಲು ಸಿವಿಲ್ ನ್ಯಾಯಾಲಯದಲ್ಲಿ ತಕ್ಷಣವೇ ದಾವೆ ಹೂಡುವುದು.
ಇದುವರೆಗೆ ಕ್ರಯಪತ್ರವಾಗದ ಪ್ರಕರಣಗಳಲ್ಲಿ, ಸರ್ಕಾರದಿಂದ ಸ್ಪಷ್ಟ ಮಾರ್ಗಸೂಚಿ ರಚನೆಯಾಗಿ ಸೂಕ್ತ ನಿರ್ದೇಶನ ಬರುವವರೆಗೂ ಪ್ರಾಧಿಕಾರದಿಂದ ಯಾವುದೇ ಕ್ರಯಪತ್ರಗಳನ್ನು ನೀಡಬಾರದು.
ಈಗಾಗಲೇ ನೋಂದಣಿಯಾಗಿರುವ ನಿವೇಶನಗಳಿಗೆ ಖಾತಾ ಮಾಡಿಕೊಡುವುದನ್ನು ತಡೆಹಿಡಿಯಲು ಮೈಸೂರು ಮಹಾನಗರ ಪಾಲಿಕೆ, ಸಂಬಂಧಪಟ್ಟ ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡುವಂತೆ ಸೂಚಿಸಲಾಗಿದೆ.
ಈ ಆದೇಶದ ಮೇರೆಗೆ ಕೈಗೊಂಡ ಕ್ರಮಗಳ ಕುರಿತು ಅನುಪಾಲನಾ ವರದಿಯನ್ನು ಸರ್ಕಾರಕ್ಕೆ ತಕ್ಷಣವೇ ಸಲ್ಲಿಸಲು ಸೂಚಿಸಲಾಗಿದೆ.
ನಿಯಮ ಉಲ್ಲಂಘಿಸಿ 50:50 ಬದಲಿ ನಿವೇಶನಗಳ ಹಂಚಿಕೆ ರದ್ದುಪಡಿಸಲು 2026 ಆಗಸ್ಟ್ 19 ರಂದು ನೀಡಿರುವ ನಿರ್ದೇಶನದನ್ವಯ ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 1100 ಬದಲಿ ನಿವೇಶನಗಳನ್ನು ರದ್ದುಪಡಿಸಲು ಸರ್ಕಾರ ನಿರ್ದೇಶನ ನೀಡಿದೆ. ಇದರ ಮೌಲ್ಯ ಸುಮಾರು 2000 ಕೋಟಿ ಎಂದು ಅಂದಾಜಿಸಲಾಗಿದೆ.
ಮೊದಲ ಹಂತದಲ್ಲಿ 2023ರ ಮಾರ್ಚ್ 14ರ ನಂತರ ನಿಯಮ ಉಲ್ಲಂಘಿಸಿ ಮಾಡಲಾದ ಹಂಚಿಕೆಯನ್ನು ರದ್ದುಪಡಿಸಲಾಗಿದೆ. ಎರಡನೇ ಹಂತದಲ್ಲಿ 2023ರ ಮಾರ್ಚ್ 14ಕ್ಕೂ ಮೊದಲೂ ಹಂಚಿಕೆ ಮಾಡಲಾಗಿರುವ ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆಯನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಕ್ರಮ ಕಂಡುಬಂದಲ್ಲಿ ಅವುಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
