ಮೈಸೂರು: ಮೈಸೂರು ನಗರದ ವಾಣಿಜ್ಯ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಿ, ನಿಯಮ ಉಲ್ಲಂಘಿಸುವ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು.
ಮೈಸೂರು ನಗರದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಅನೇಕ ವಾಣಿಜ್ಯ ಕಟ್ಟಡಗಳು, ಶೋರೂಂ, ಬಟ್ಟೆ ಮಳಿಗೆ, ಪಬ್, ಹೋಟೆಲ್, ಮಾಲ್ಗಳು ಹಾಗೂ ಇತರೆ ವ್ಯಾಪಾರಿ ಸಂಸ್ಥೆಗಳಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ,ಇದು ಆತಂಕಕಾರಿ ವಿಷಯ
ಎಂದು ಕನ್ನಡಾಂಬೆ ರಕ್ಷಣಾ ವೇದಿಕೆ ಸಂಸ್ಥಾಪಕ,ರಾಜ್ಯಾಧ್ಯಕ್ಷ ರಾಜಶೇಖರ್ ತಿಳಿಸಿದರು.
ಆಯುಕ್ತರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು,
ಇತ್ತೀಚೆಗೆ ಮೈಸೂರು ನಗರದ ಪಬ್ ವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಅಮೂಲ್ಯ ಜೀವಹಾನಿ ಆಗಿದೆ,ಈ ಘಟನೆ ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ಇಂತಹ ದುರಂತಗಳು ಮರುಕಳಿಸದಂತೆ ತಡೆಯುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ನಗರದ ಹಲವು ಬಟ್ಟೆ ಶೋರೂಂಗಳು ಹಾಗೂ ಜನಸಂದಣಿ ಹೆಚ್ಚಿರುವ ವಾಣಿಜ್ಯ ಕಟ್ಟಡಗಳಲ್ಲಿ ಅಗ್ನಿ ನಂದಿಸುವ ಸಾಧನಗಳು, ತುರ್ತು ನಿರ್ಗಮನ ವ್ಯವಸ್ಥೆ, ಅಗ್ನಿ ಎಚ್ಚರಿಕೆ ವ್ಯವಸ್ಥೆ ಸೇರಿದಂತೆ ಕಡ್ಡಾಯ ಸುರಕ್ಷತಾ ಕ್ರಮಗಳು ಸಮರ್ಪಕವಾಗಿಲ್ಲ ಎಂಬ ಸಾರ್ವಜನಿಕ ದೂರುಗಳು ಕೇಳಿಬರುತ್ತಿವೆ ಎಂದು ಹೇಳಿದರು.
ಇಂತಹ ಕಟ್ಟಡಗಳಲ್ಲಿ ಯಾವುದಾದರೂ ಅಗ್ನಿ ಅವಘಡ ಸಂಭವಿಸಿದರೆ ನೂರಾರು ಅಥವಾ ಸಾವಿರಾರು ಜನರ ಜೀವಕ್ಕೆ ಅಪಾಯ ಕಟ್ಟಿಟ್ಟಬುತ್ತಿ, ಅಂತಹ ಪರಿಸ್ಥಿತಿಗೆ ಯಾರು ಹೊಣೆಗಾರರು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಆದ್ದರಿಂದ ಮೈಸೂರು ಮಹಾನಗರ ಪಾಲಿಕೆಯು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ,
ನಗರದ ಎಲ್ಲಾ ವಾಣಿಜ್ಯ ಕಟ್ಟಡಗಳ ಅಗ್ನಿ ಸುರಕ್ಷತಾ ಪರಿಶೀಲನೆಯನ್ನು ತಕ್ಷಣ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಗ್ನಿಶಾಮಕ ಇಲಾಖೆಯ ನಿಯಮಗಳನ್ನು ಪಾಲಿಸದ ಕಟ್ಟಡಗಳಿಗೆ ನೋಟಿಸ್ ನೀಡಬೇಕು,ನಿಗದಿತ ಅವಧಿಯೊಳಗೆ ಸುರಕ್ಷತಾ ಕ್ರಮಗಳನ್ನು ಅಳವಡಿಸದ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಅಗತ್ಯವಿದ್ದಲ್ಲಿ ಅವುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು.
ಸಾರ್ವಜನಿಕರ ಜೀವ ಮತ್ತು ಆಸ್ತಿಯ ರಕ್ಷಣೆಗೆ ಅಗ್ನಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಮನವಿಯನ್ನು ಸಲ್ಲಿಸಿದ ಈ ದಿನದಿಂದ 7 ದಿನಗಳೊಳಗೆ ಸೂಕ್ತ ಕ್ರಮ ಕೈಗೊಂಡು ಅದರ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ರಾಜಶೇಖರ್ ಆಯುಕ್ತ ರಲ್ಲಿ ಮನವಿ ಮಾಡಿದರು.
ಒಂದು ವೇಳೆ ನಿಗದಿತ ಅವಧಿಯೊಳಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿದ್ದಲ್ಲಿ, ಕನ್ನಡಾಂಬೆ ರಕ್ಷಣ ವೇದಿಕೆ ರಾಜ್ಯದ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಹೋರಾಟಗಾರರೊಂದಿಗೆ ಸೇರಿ ಮೈಸೂರು ಮಹಾನಗರ ಪಾಲಿಕೆ ಎದುರು ಬೃಹತ್ ಜನಾಂದೋಲನ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ. ಇದರಿಂದ ಉಂಟಾಗುವ ಎಲ್ಲಾ ಬೆಳವಣಿಗೆಗಳಿಗೆ ಸಂಬಂಧಪಟ್ಟ ಆಡಳಿತವೇ ಸಂಪೂರ್ಣ ಹೊಣೆಗಾರರು ಎಂದು ಎಚ್ಚರಿಸಿದರು.
ಕನ್ನಡಾಂಬೆ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯ ಅಧ್ಯಕ್ಷ ರಾಜಶೇಖರ್ ಜತೆ ರಾಜ್ಯ ಖಜಾಂಜಿ ನಂಜುಂಡ, ಮೈಸೂರು ಪ್ರಾಂತ್ಯ ಗೌರವಾಧ್ಯಕ್ಷ ರವಿಗೌಡ , ಮಹಿಳಾ ಘಟಕದ ಅಧ್ಯಕ್ಷೆ ತಾರಾ ಜಿ ಹಾಜರಿದ್ದರು.
