ಹಾಸನ: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸದಸ್ಯರು ನವದೆಹಲಿಯಲ್ಲಿ ಎಸಿ ರೂಂನಲ್ಲಿ ಕೂತು ನೀರು ಬಿಡಿ ಎಂದು ಕರ್ನಾಟಕಕ್ಕೆ ಆದೇಶ ನೀಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಆಯಾ ರಾಜ್ಯಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಖುದ್ದು ವೀಕ್ಷಿಸಿದ ನಂತರ ಆದೇಶ ಹೊರಡಿಸಬೇಕಿತ್ತು ಎಂದು ತಿಳಿಸಿದರು.
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು,
ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿನಿತ್ಯ 3,500 ನೀರನ್ನು ಹರಿಸಬೇಕು ಎಂದು ಕಾವೇರಿ ಪ್ರಾಧಿಕಾರ ಊಹಾತ್ಮಕವಾಗಿ ಆದೇಶ ನೀಡಿದೆ. ಬರುವ ದಿನಗಳಲ್ಲಿ ಕಾವೇರಿ ಕಣಿವೆ ಜಲಾಶಯಗಳಿಗೆ 12 ಟಿಎಂಸಿ ನೀರು ಹರಿದು ಬರಬಹುದು ಎಂಬ ಊಹೆ ಮಾಡಿದೆ. ಯಾವ ಆಧಾರದಲ್ಲಿ ಇಂತಹ ಊಹೆಯನ್ನು ಪ್ರಾಧಿಕಾರ ಮಾಡಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಒಂದು ವೇಳೆ ನೀರು ಹರಿದು ಬರದೇ ಇದ್ದರೆ ಕರ್ನಾಟಕದ ಪರಿಸ್ಥಿತಿ ಏನು ಎಂದು ಆತಂಕ ವ್ಯಕ್ತಪಡಿಸಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕವನ್ನು ನಿರಂತರವಾಗಿ ನಿರ್ಲಕ್ಷ ಮಾಡುವ ಕೆಲಸ ಆಗುತ್ತಿದೆ. ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ಕಾವೇರಿ ಸರ್ವಪಕ್ಷ ಸಭೆಯಲ್ಲಿ ನಾನು ಭಾಗವಹಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ಆದೇಶ ಹೊರಡಿಸುವ ಮುನ್ನ ಪ್ರಾಧಿಕಾರವು ಕರ್ನಾಟಕದ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಎಷ್ಟು ನೀರಿನ ಸಂಗ್ರಹ ಇದೆ? ಕುಡಿಯುವ ನೀರಿಗೆ ಎಷ್ಟು ನೀರಿನ ಅಗತ್ಯವಿದೆ ಹಾಗೂ ತಮಿಳುನಾಡಿನ ಮೆಟ್ಟೂರು ಮತ್ತು ಭವಾನಿ ಜಲಾಶಯಗಳಲ್ಲಿ ಎಷ್ಟು ನೀರಿನ ಸಂಗ್ರಹ ಇದೆ ಹಾಗೂ ಅಲ್ಲಿನ ಜನರಿಗೆ ಕುಡಿಯಲು ಉದ್ದೇಶಿತ ಎಷ್ಟು ನೀರು ಬೇಕಿದೆ ಎಂಬ ಅಂಶಗಳ ಬಗ್ಗೆ ಅಣೆಕಟ್ಟೆಗಳಿಗೆ ಭೇಟಿ ನೀಡಿ ಕೂಲಂಕಶವಾಗಿ ಮಾಹಿತಿ ಪಡೆಯಬೇಕಿತ್ತು. ಅದನ್ನು ಮಾಡದೆ ಏಕಪಕ್ಷವಾಗಿ ಆದೇಶ ಹೊರಡಿಸಿ ಕರ್ನಾಟಕದ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಿಮ್ಮ ಆದೇಶವನ್ನು ಪಾಲನೆ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಪ್ರಾಧಿಕಾರದ ಮುಖಕ್ಕೆ ಹೊಡೆದಂತೆ ಹೇಳಬೇಕಾಗಿತ್ತು. ಆದರೆ ಈ ಬಗ್ಗೆ ಅಸಹಾಯಕ ಮೌನ ತಾಳಿರುವುದು ನನಗೆ ಸರಿ ಕಾಣುತ್ತಿಲ್ಲ ಎಂದು ಹೇಳಿದರು.
ತಮಿಳುನಾಡು ಜನ ಮಾತ್ರ ರೈತರಾ, ಕರ್ನಾಟಕದವರು ರೈತರಲ್ಲವೇ,ನೀರು ಬಿಡಿ ಎಂದು ಹೇಳುವುದಕ್ಕೆ ಪ್ರಾಧಿಕಾರ ಯಾವ ಅಂಶಗಳನ್ನು ಪರಿಗಣಿಸಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ರಾಜ್ಯದಲ್ಲಿ ಬರದಿಂದ ರೈತರು ತತ್ತರಿಸಿದ್ದಾರೆ. ಕಾವೇರಿ ಕಣಿವೆ ಪ್ರದೇಶದಲ್ಲಿ ಬೆಳೆಗಳು ಒಣಗುತ್ತಿವೆ. ನಮ್ಮ ರೈತರಿಗೇ ನೀರು ಕೊಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಆದರೆ ನೆರೆರಾಜ್ಯಕ್ಕೆ ಹರಿಸಬೇಕು ಎಂದು ಹೇಳಿದರೆ ಹೇಗೆ ಎಂದು ಹೆಚ್ ಡಿಕೆ ಖಾರವಾಗಿ ಪ್ರಶ್ನಿಸಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಎಲ್ಲಾ ಜಲಾಶಯಗಳು ಖಾಲಿ ಇವೆ. ಕಾವೇರಿ ಭಾಗದಲ್ಲಿ 54 ಟಿಎಂಸಿಯಷ್ಟು ಮಾತ್ರ ನೀರಿನ ಸಂಗ್ರಹ ಇದೆ. ನಮಲ್ಲಿ ಮಳೆ ಕೊರತೆ ಉಂಟಾಗಿದೆ. ಕೃಷಿ ಬೆಳೆಗಳಿಗೆ ನೀರು ಬಿಡುವುದಿಲ್ಲ ಎಂದು ಈಗಾಗಲೇ ರಾಜ್ಯ ಸರಕಾರ ಘೋಷಣೆ ಮಾಡಿದೆ. ಮುಂದಿನ ಆರು ತಿಂಗಳಲ್ಲಿ ಬೆಂಗಳೂರಿನ ಕುಡಿಯುವ ನೀರಿನ ಉದ್ದೇಶಕ್ಕೆ 30 ಟಿಎಂಸಿ ನೀರಿನ ಅಗತ್ಯವಿದೆ. ಕುಡಿವ ನೀರಿಗೆ ಮೊದಲ ಆದ್ಯತೆ ಎನ್ನುವುದು ಇವರಿಗೆ ಗೊತ್ತಿಲ್ಲವೇ? ತಮಿಳುನಾಡು ಯಾವ ಉದ್ದೇಶಕ್ಕಾಗಿ ನೀರು ಕೇಳುತ್ತಿದೆ ಎಂಬುದನ್ನು ಖುದ್ದಾಗಿ ಪ್ರಾಧಿಕಾರದ ಸದಸ್ಯರು ಪರಿಶೀಲನೆ ನಡೆಸಬೇಕಿತ್ತು, ರೈತರು ಮತ್ತು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು ಸರಿಯಾಗಿದೆ ಪ್ರತಿಭಟನೆಗೆ ನಮ್ಮ ಬೆಂಬಲ ಇದೆ ಎಂದು ತಿಳಿಸಿದರು.
ಕಾವೇರಿ ಪ್ರಾಧಿಕಾರದ ಆದೇಶವನ್ನು ನಾವು ಮೌನವಾಗಿ ಒಪ್ಪಿಕೊಂಡರೆ ಅದು ನಮ್ಮ ದೌರ್ಬಲ್ಯ ಎಂದಾಗುತ್ತದೆ. ಹೀಗಾಗಿ ಮೇಲ್ಮನವಿ ಸಲ್ಲಿಸಲೇ ಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.
ಸುಪ್ರೀಂ ಕೋರ್ಟ್’ಗೂ ನಾವು ಮನವಿ ಸಲ್ಲಿಸಬೇಕಾಗುತ್ತದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ಯಾವುದೇ ಪಕ್ಷದ ಸರ್ಕಾರ ಇರಬಹುದು ಅಥವಾ ಯಾರೇ ಮುಖ್ಯಮಂತ್ರಿ ಆಗಿರಬಹುದು. ನಾವೆಲ್ಲರೂ ರಾಜ್ಯದ ಹಿತಾಸಕ್ತಿಯ ಪರವಾಗಿ ನಿಲ್ಲಬೇಕಾಗುತ್ತದೆ ಎಂದು ಹೇಳಿದರು.
ಅಧಿಕಾರದ ಆದೇಶ ಸಂಪೂರ್ಣ ಅವೈಜ್ಞಾನಿಕ ಎಂಬುದು ನನ್ನ ಅಭಿಪ್ರಾಯ. ನೀರು ಬಿಡಬೇಕು ಬೇಡವೋ ಎಂಬ ಬಗ್ಗೆ ಚರ್ಚೆ ನಡೆಸಲು ಭಾನುವಾರ ಸರ್ವಪಕ್ಷ ಸಭೆ ಕರೆಯಲಾಗಿದೆ, ಇಂತಹ ಸಂದರ್ಭ ಎದುರಾದಾಗ ಸರ್ವಪಕ್ಷ ಸಭೆ ಕರೆದು ಪರಿಹಾರವನ್ನು ಕಂಡುಕೊಂಡ ನಿದರ್ಶನಗಳಿವೆ ಎಂದು ಕುಮಾರಸ್ವಾಮಿ ಹೇಳಿದರು.
ನಮ್ಮ ಸರಕಾರ ಕೂಡ ಮುಲಾಜಿಲ್ಲದೆ ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಬೇಕು. ನೀರು ಬಿಡಿ ಎಂದು ಹೇಳಲು ಪರಿಗಣಿಸಿದ ಅಂಶಗಳ ಬಗ್ಗೆ ಸಂಪೂರ್ಣ ಹಾಗೂ ಸರಿಯಾದ ಮಾಹಿತಿಯೊಂದಿಗೆ ವಾದ ಮಂಡಿಸಬೇಕು. ಕಾವೇರಿ ಕಣಿವೆಯಲ್ಲಿ ಸಂಗ್ರಹವಾಗಿರುವ 55 ಟಿಎಂಸಿ ನೀರಿನಲ್ಲಿ 10 ಟಿಎಂಸಿ ನೀರು ಡೆಡ್ ಸ್ಟೋರೇಜ್. ಉಳಿದ ನೀರಿನಲ್ಲಿ ಬೆಂಗಳೂರಿಗೆ 30 ಟಿಎಂಸಿ ಬೇಕು. ಪರಿಸರ ಸಂರಕ್ಷಣೆಗೆ 10 ಟಿಎಂಸಿ ನೀರು ಮೀಸಲಾಗಿರಬೇಕು. ಇದೆಲ್ಲವೂ ಪ್ರಾಧಿಕಾರಕ್ಕೆ ಗೊತ್ತಿಲ್ಲವೆ ಅಥವಾ ರಾಜ್ಯ ಸರ್ಕಾರ ಮಾಹಿತಿ ನೀಡಲಿಲ್ಲವೋ ಎಂಬುದು ಅರ್ಥವಾಗುತ್ತಿಲ್ಲ ಎಂದು ಸಚಿವರು ಹೇಳಿದರು.
ಮೇಕೆದಾಟು ಯೋಜನೆಗೆ ಪರಿಷ್ಕೃತ ಸಮಗ್ರ ಯೋಜನಾ ವರದಿ ಸಲ್ಲಿಸಿ ಎಂದು ಕೇಂದ್ರ ಜಲ ಆಯೋಗ ಹೇಳಿದೆ. ಈ ಮೊದಲು ಸಲ್ಲಿಸಿದ್ದ ಡಿಪಿಆರ್ ಅನ್ನು ವಾಪಸ್ ಮರಳಿಸಿದೆ. ಈ ಬಗ್ಗೆ ದೇವೇಗೌಡರು ಮಹತ್ವದ ಸಲಹೆಗಳನ್ನು ನೀಡಿ ಹಿಂದೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು. 30 ಟಿಎಂಸಿ ನೀರು ಸಂಗ್ರಹ ಮಾಡಿಕೊಳ್ಳಲು ನಮವೆ ಅವಕಾಶ ಇದೆ. ಅದರಲ್ಲಿ 27 ಟಿಎಂಸಿ ನೀರನ್ನು ನಾವೇ ಬಳಸಿಕೊಳ್ಳಲು ಪ್ರಾಧಿಕಾರದ ತೀರ್ಪಿನಲ್ಲೇ ಅವಕಾಶ ಇದೆ. ಇದರಲ್ಲಿ 4.5 ಟಿಎಂಸಿ ನೀರನ್ನು ಬೆಂಗಳೂರಿಗೆ ಬಳಸಲು ಅವಕಾಶವಿದೆ. ಹಾಗಾಗಿ ನಾವು ಈ ಆಧಾರದಲ್ಲಿ ಡಿಪಿಆರ್ ಸಿದ್ಧಪಡಿಸಿ ಜಲ ಆಯೋಗಕ್ಕೆ ಸಲ್ಲಿಸಬೇಕು. ಅದನ್ನು ಬಿಟ್ಟು ಕೇಂದ್ರ ಸರಕಾರ ಅನುಮತಿ ನೀಡಲಿಲ್ಲ, ಕುಮಾರಸ್ವಾಮಿ ಅವರು ಪ್ರಧಾನಿಗಳ ಬಳಿ ಮಾತಾಡಲಿಲ್ಲ ಎಂದು ಹೇಳಿದರೆ ಯಾರೂ ಕೇಳುವುದಿಲ್ಲ. ನಮ್ಮ ನೀರು ನಮ್ಮ ಹಕ್ಕು ಎಂದು ಇವತ್ತಿನ ಮುಖ್ಯಮಂತ್ರಿಗಳ ನೇತೃತ್ವದಲ್ಲಿಯೇ ಹೋರಾಟ ನಡೆದಿತ್ತಲ್ಲ,ರಾಜಕೀಯ ಬಿಟ್ಟು ನಾವೇನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಈ ಸರ್ಕಾರ ಚರ್ಚಿಸಲಿ ಎಂದು ಸಚಿವರು ಹೇಳಿದರು.
ಬರಗಾಲ ಬಂತು ಯಾವುದೋ ಹೊಲದಲ್ಲಿ ನಿಂತು ಫೊಟೊಶೂಟ್ ಮಾಡಿಸಿಕೊಂಡರೆ ಉಪಯೋಗ ಇಲ್ಲ, ನಿಮ್ಮ ಗ್ಯಾರಂಟಿಗಳಿಗೆ ಎರಡು ವರ್ಷ ತಡೆ ಹಾಕಿ.
ನಿಮ್ಮ ಗೃಹಲಕ್ಷ್ಮಿ ಯೊಜನೆಗೆ ಹಣ ಕೊಡಲು ಆಗುತ್ತಿಲ್ಲ. ಸಂಪುಟ ವಿಸ್ತರಣೆ ಆಗುತ್ತಾ ಇಲ್ಲವಾ ಎಂದು ದೆಹಲಿಗೆ ಹೋಗಿ ಚಾತಕ ಪಕ್ಷಿಗಳಂತೆ ಕಾದು ಕೂತಿದ್ದೀರಿ. ಕಷ್ಟದಲ್ಲಿರುವ ರೈತರಿಗೆ ಆತ್ಮಸ್ಥೈರ್ಯ ತುಂಬುವ ಬದಲು ಕ್ಯಾಬಿನೆಟ್ ಜಪ ಮಾಡುತ್ತಿದ್ದೀರಿ ಎಂದು ಸರ್ಕಾರದ ಹೆಚ್ ಡಿ ಕೆ ವಾಗ್ದಾಳಿ ನಡೆಸಿದರು.
ರಾಜ್ಯಕ್ಕೆ ತಮಿಳುನಾಡು ಮುಖ್ಯಮಂತ್ರಿ ಬರುತ್ತಿದ್ದಾರೆ.ಅದಕ್ಕೆ ನನ್ನ ಆಕ್ಷೇಪ ಇಲ್ಲ. ಆದರೆ, ಕಾವೇರಿ ಸಂಕಷ್ಟದ ಬಗ್ಗೆ ನಮ್ಮ ಮುಖ್ಯಮಂತ್ರಿ ಅವರೊಂದಿಗೆ ನೇರವಾಗಿ ಚರ್ಚೆ ಮಾಡಬೇಕು,ಕಾವೇರಿ ವಿಚಾರ ಇಟ್ಟುಕೊಂಡು ನಿಮ್ಮ ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಬೇಳೆ ಬೈಸಿಕೊಳ್ಳುತ್ತಿವೆ ಎಂದು ಮುಖಕ್ಕೆ ಹೇಳುವ ಅಗತ್ಯವಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಇದನ್ನೇ ಮಾಡಿಕೊಂಡಿದ್ದೀರಿ, ಈ ವಿವಾದ ಇನ್ನೆಷ್ಟು ವರ್ಷ ಜೀವಂತವಾಗಿರಬೇಕು ಎಂದು ಅವರನ್ನೇ ಕೇಳಬೇಕು ಎಂದು ಸಚಿವ ಕುಮಾರಸ್ವಾಮಿ ಅವರು ರಾಜ ಸರ್ಕಾರವನ್ನು ಒತ್ತಾಯಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕರಾದ ಎಸ್.ಎಲ್. ಭೋಜೇಗೌಡ, ಸಿ.ಎನ್.ಬಾಲಕೃಷ್ಣ, ಸ್ವರೂಪ್ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
