ಯಳಂದೂರು: ಯಳಂದೂರು ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಆಸ್ಪತ್ರೆ ಕಟ್ಟಡಕ್ಕಾಗಿ ರಸ್ತೆ ಅಗಲೀಕರಣ ಮಾಡುವ ಅವಶ್ಯಕತೆ ಇದ್ದು,ಕೂಡಲೇ ಕಂದಾಯ, ತೋಟಗಾರಿಕೆ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೇರಿ ಬೇಗ ಜಾಗ ಗುರುತಿಸಿಕೊಡಬೇಕೆಂದು ಜಿಲ್ಲಾಧಿಕಾರಿ ಶ್ರೀರೂಪಾ ಸೂಚಿಸಿದರು.
ಅವರು ಸೋಮವಾರ ಕಟ್ಟಡ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಮಾತನಾಡಿದರು.
ಈ ಆಸ್ಪತ್ರೆಗೆ ಸಾಗಲು ಬೈಪಾಸ್ ರಸ್ತೆ ಹಾಗೂ ಇದರ ಪಕ್ಕದಲ್ಲಿರುವ ಹಳೇ ಕಟ್ಟಡದಿಂದ ಸಂಪರ್ಕ ಕಲ್ಪಿಸುವ ರಸ್ತೆ ಇದೆ. ಈ ರಸ್ತೆ ಕಿರಿದಾಗಿದೆ. ಎರಡು ವಾಹನಗಳು ಸಾಗಲು ಇದರಲ್ಲಿ ಅಸಾಧ್ಯವಾಗಿದೆ. ಹಾಗಾಗಿ ಈ ರಸ್ತೆ ಅಗಲೀಕರಣ ಮಾಡಬೇಕಿದೆ. ಇದರ ಪಕ್ಕದಲ್ಲೇ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗವಿದೆ. ಈ ಜಾಗವನ್ನು ಆದಷ್ಟು ಬೇಗ ತೆರವುಗೊಳಿಸಬೇಕು, ಇದಕ್ಕೆ ಕಂದಾಯ ಇಲಾಖೆ, ಸರ್ವೇ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಸರ್ವೇ ನಡೆಸಿ ಸ್ಕೆಚ್ ತಯಾರಿಸಿ ರಸ್ತೆಗೆ ಅಗತ್ಯವಾಗಿರುವ ಜಾಗವನ್ನು ಗುರುತಿಸಿ ಈ ಕೆಲಸ ಆದಷ್ಟು ಬೇಗ ಮಾಡಬೇಕು ಎಂದು ಸಲಹೆ ನೀಡಿದರು.
ಪಟ್ಟಣದಲ್ಲಿ ನಿರ್ಮಾಣವಾಗಲಿರುವ ಈ ಆಸ್ಪತ್ರೆಯಿಂದ ಈ ಭಾಗದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಕಟ್ಟಡದ ಕಾಮಗಾರಿ ಬಹುತೇಕ ಮುಗಿಯುವ ಹಂತ ತಲುಪಿದೆ. ಇಲ್ಲಿಗೆ ಆಂಬುಲೆನ್ಸ್ ಸೇರಿದಂತೆ ಇತರೆ ವಾಹನಗಳು ಬರಲು ಅನುಕೂಲವಾಗುವಂತೆ ಬೈಪಾಸ್ ರಸ್ತೆ ಹಾಗೂ ಪಟ್ಟಣದ ರಸ್ತೆಯಿಂದ ಎರಡೂ ಕಡೆಯಿಂದಲೂ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಆದರೆ ಇದಕ್ಕೆ ಬೇಕಿರುವ ಜಾಗವನ್ನು ಗುರುತಿಸುವ ಕೆಲಸ ಬಾಕಿ ಇದೆ ಇದನ್ನು ಬೇಗ ಮುಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮಾಹಿತಿ ನೀಡಿದರು.
ಈ ವೇಳೆ ತಹಸೀಲ್ದಾರ್ ಎಸ್.ಎಲ್. ನಯನ, ಮುಖ್ಯಾಧಿಕಾರಿ ಎಂ.ಪಿ. ಮಹೇಶ್ಕುಮಾರ್, ವೈದ್ಯಾಧಿಕಾರಿ ಡಾ. ಶ್ರೀಧರ್, ಆರೋಗ್ಯ ನಿರೀಕ್ಷಕ ರಾಘವೇಂದ್ರ ಸಿಪಿಐ ಸುಬ್ರಹ್ಮಣ್ಯ, ಸರ್ವೇ ಇಲಾಖೆಯ ಕೀರ್ತಿಕುಮಾರ್, ನಗರಾಭಿವೃದ್ಧಿ ಕೋಶದ ಎಇಇ ರಾಮಚಂದ್ರು ಸೇರಿದಂತೆ ಅನೇಕರು ಹಾಜರಿದ್ದರು.
