ಮೈಸೂರು: ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಳದ ಬಾರುಪುರ್ ಮತ್ತು ರಾಜಸ್ಥಾನದ ಶ್ರೀ ಗಂಗಾ ನಗರದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಘಟನೆಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಪಂಚವನ್ನೇ ಅರಿಯದ 13 ವರ್ಷದ ಒಬ್ಬ ಅಪ್ರಾಪ್ತ ಮೇಲೆ 30 ಜನ ನರರಾಕ್ಷಸರು ಎರಗುತ್ತಾರೆಂದರೆ ಇದೆಂಥ ಸಮಾಜ?, ಇಂತಹ ನೀಚ ಘಟನೆಗಳಲ್ಲಿ ಸರ್ಕಾರದ ಯಾವುದೇ ಕಣ್ಣೂರೆಸುವ ತನಿಖೆಯನ್ನಾಗಲಿ ಅಥವಾ ನಿಧಾನಗತಿಯ ಶಿಕ್ಷೆಯನ್ನಾಗಲಿ ಜನರು ಸಹಿಸುವುದಿಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆ ಖಾತ್ರಿಪಡಿಸಬೇಕೆಂದು ಪ್ರಕಟಣೆಯಲ್ಲಿ ಅವರು ಒತ್ತಾಯಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಈಚೆಗೆ 14 ವರ್ಷದ ಅಪ್ರಾಪ್ತರು ಅಶ್ಲೀಲ ಸಿನಿಮಾ ಮತ್ತು ಮದ್ಯ, ಮಾದಕ ವಸ್ತುಗಳಿಗೆ ಬಲಿಯಾಗಿ 9 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ
ಎಸಗಿರುವ ಘಟನೆ ನಾಗರಿಕ ಸಮಾಜವನ್ನೇ ತಲೆತಗ್ಗಿಸುಂತೆ ಮಾಡಿದೆ.
ವಿಕೃತಿಗಳ ವಿರುದ್ಧ ಪ್ರಜ್ಞಾವಂತ ಜನತೆ ಸೇರಿ ಇಡೀ ಮಹಿಳಾ ಸಮುದಾಯ ಬಲಿಷ್ಠವಾದ ಹೋರಾಟ ಕಟ್ಟಲು ಮುಂದೆ ಬರಬೇಕೆಂದು ಮಾಧ್ಯಮಗಳ ಮೂಲಕ ರೇಖಾ ಶ್ರೀನಿವಾಸ್ ಕರೆ ನೀಡಿದ್ದಾರೆ.
