(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ತಾಲ್ಲೂಕಿನ ಕೊಂಗರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜನರೇ ಇಲ್ಲದೆ ಅಧಿಕಾರಿಗಳು ನರೇಗಾ ಯೋಜನೆ,15 ನೇ ಹಣಕಾಸು ಯೋಜನೆ, ಹಾಗೂ ರಾಜ್ಯ ಹಣಕಾಸು ಆಯೋಗದ ಸಾಮಾಜಿಕ ಲೆಕ್ಕಪರಿಶೋಧನಾ ಸಭೆ ನಡೆಸಿದರು!
ತಾಲ್ಲೂಕಿನ ಕೊಂಗರಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ 2025 – 26ನೇ ಸಾಲಿನ ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು.
ಆದರೆ,ಸಭೆಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಪ್ರಚಾರ ಮಾಡದೆ ಇದ್ದ ಕಾರಣ ಸಭೆಗೆ ನಿರೀಕ್ಷಿತ ಮಟ್ಟದಲ್ಲಿ ಜನರು ಹಾಜರಾಗಿರಲಿಲ್ಲ. ಕೇವಲ 8 ರಿಂದ 10 ಮಂದಿ ಮಾತ್ರ ಸಭೆಯಲ್ಲಿ ಕುಳಿತಿದ್ದರು. ಆದರೂ ಅಧಿಕಾರಿಗಳು ಸಭೆ ನಡೆಸಿದರು!
ಸಾಮಾನ್ಯವಾಗಿ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ನರೇಗಾ ಹಾಗೂ 15ನೇ ಹಣಕಾಸು ಯೋಜನೆ ಕಾಮಗಾರಿಗಳ ಖರ್ಚು ವೆಚ್ಚವನ್ನು ಪ್ರತಿ ವರ್ಷದ ಕೊನೆಯಲ್ಲಿ ಸಂಬಂಧಪಟ್ಟ ಜಿ. ಪಂ. ಸಾಮಾಜಿಕ ಲೆಕ್ಕಪರಿಶೋಧನಾ ವಿಭಾಗದ ಅಧಿಕಾರಿಗಳಿಂದ ಲೆಕ್ಕಪರಿಶೋಧನೆ ನಡೆಸಿ ನಂತರ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆಯನ್ನು ಆಯೋಜಿಸಿ ಸಭೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳ ಜನರನ್ನು ಆಹ್ವಾನಿಸಲು ಟಾಮ್ ಟಾಮ್ ಹೊಡೆಸಿ ಮಾಹಿತಿ ತಿಳಿಸಬೇಕು.
ಆದರೆ ಇಲ್ಲಿನ ಗ್ರಾಮ ಪಂಚಾಯಿತಿಯವರು ಪ್ರಚಾರ ಪಡಿಸಿದರೊ ಇಲ್ಲವೋ? ಇಲ್ಲಿ ನಡೆದ ಸಭೆಗೆ ಕನಿಷ್ಠ 10 ಮಂದಿಯೂ ಭಾಗವಹಿಸಿರಲಿಲ್ಲ. ಜನರು ಬಾರದೆ ಇದ್ದುದರಿಂದ ಸಭೆಯನ್ನು ಮುಂದೂಡಬೇಕಾಗಿತ್ತು,ಆದರೂ ಸಭೆ ನಡೆಯಿತು.
ಸಭೆಯಲ್ಲಿ ನರೇಗಾ ಯೋಜನೆಯ ಅನುದಾನದಲ್ಲಿ ಏ.1, 2025 ರಿಂದ ಮಾ.31, 2026 ರ ವರೆಗೆ ನಡೆಸಲಾಗಿರುವ ಕಾಮಗಾರಿಗಳ ಹಾಗೂ 15 ನೇ ಹಣಕಾಸು ಯೋಜನೆ, ರಾಜ್ಯ ಹಣಕಾಸು ಆಯೋಗದ ಅನುದಾನದಲ್ಲಿ ನಡೆಸಲಾಗಿರುವ ಕಾಮಗಾರಿಗಳ ವಿವರವನ್ನು ನರೇಗಾ ಲೆಕ್ಕಪರಿಶೋಧನಾ ಸಂಯೋಜಕ ಸಿದ್ದಪ್ಪಾಜಿರವರು ಮಂಡಿಸಿದರು.
ನರೇಗಾ ಯೋಜನೆಯಡಿ ಗ್ರಾ.ಪಂ ವತಿಯಿಂದ ಹಾಗೂ ಕಾಮಗಾರಿ ಅನುಷ್ಠಾನ ಇಲಾಖೆಗಳಿಂದ ನಡೆಸಲಾಗಿರುವ ಕಾಮಗಾರಿಗಳ ವಿವರಗಳನ್ನು ಮಂಡಿಸಿದರು. ಕಾಮಗಾರಿಗಳಿಗೆ ಒಟ್ಟು 1681200 ರೂ.ಗಳು ಖರ್ಚಾಗಿದ್ದು,15 ನೆ ಹಣಕಾಸು ಯೋಜನೆ ಪ್ರಾರಂಭಿಕ ಶಿಲ್ಕು 5535771 ರೂ, ಬಿಡುಗಡೆಯಾದ ಅನುದಾನ 1881 038 ರೂ, ಬಿಡುಗಡೆಯಾದ ಬಡ್ಡಿ ಹಣ 119374 ರೂ, ಒಟ್ಟು ಲಭ್ಯವಿದ್ದ 7536183 ರೂ. ಗಳ ಅನುದಾನದಲ್ಲಿ ಗ್ರಾಂ, ಪಂ. ತಾ. ಪಂ, ಜಿ.ಪಂ ಗಳ ವತಿಯಿಂದ ಕಾಮಗಾರಿಗಳನ್ನು ನಡೆಸಲಾಗಿದ್ದು ಅದರಲ್ಲಿ ಬಹುತೇಕವಾಗಿ ಪಂಚಾಯಿತಿ ವ್ಯಾಪ್ತಿಯ ಚರಂಡಿ, ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹಾಗೂ ಕುಡಿಯುವ ನೀರಿಗೆ ಕೊಳವೆ ಬಾವಿ ಕೊರೆಸುವುದು, ಪೈಪ್ ಲೈನ್, ವಿದ್ಯುತ್ ಬಿಲ್, ನೌಕರರ ವೇತನಕ್ಕಾಗಿ 4621091 ರೂ.ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಈ ವೇಳೆ ಶೌಚಾಲಯ ನಿರ್ಮಾಣ ಮಾಡಿದ ಬಡ ಫಲಾನುಭವಿಗಳಿಗೆ ಬಿಲ್ ಪಾವತಿ ಆಗದಿರುವುದು ಬಹುತೇಕ ಕಡೆ ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವ ಬಗ್ಗೆ ಸಭೆಯಲ್ಲಿ ಆರೋಪಿಸಲಾಯಿತು.
ಈ ವೇಳೆ ಆಡಳಿತ ಅಧಿಕಾರಿ ಸುಧನ್ವನಾಗ್ ಪಿ.ಡಿ. ಒ ಮಹೇಂದ್ರ, ಕಾರ್ಯದರ್ಶಿ ನಾಗರಾಜು, ಎಸ್.ಡಿ.ಎ ನಂಜುಂಡಸ್ವಾಮಿ, ತೋಟಗಾರಿಕೆ ಇಲಾಖೆ ಮಂಜುಳ, ಸಮಾಜ ಕಲ್ಯಾಣ ಇಲಾಖೆ ಮಧು ಸೂಧನ್ ಮತ್ತಿತರರು ಹಾಜರಿದ್ದರು.
