ಬೆಂಗಳೂರು: ಬೆಂಗಳೂರು ತಾವರೆಕೆರೆ ಹೋಬಳಿ ಮಾದಾಪಟ್ಟಣದಲ್ಲಿ ಸಂಭವಿಸಿದ ಕ್ವಾರಿ ದುರಂತದಲ್ಲಿ ಅಮಾಯಕ ಕಾರ್ಮಿಕರು ಸಾವನ್ನಪ್ಪಿರುವುದು ಹಾಗೂ ಹಲವರು ಗಂಭೀರವಾಗಿ ಗಾಯಗೊಂಡಿರುವುದು ಅತ್ಯಂತ ಆಘಾತಕಾರಿ ಮತ್ತು ದುಃಖದ ಸಂಗತಿಯಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಹೇಳಿದೆ.
ಮೃತ ಕಾರ್ಮಿಕರಿಗೆ ಸಂತಾಪ ಸೂಚಿಸಿ ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸಿದೆ.
ಈ ದುರಂತವು ಕೇವಲ ಒಂದು ಅಪಘಾತವಲ್ಲ, ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೇ ಎಂಬ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಘಟನೆಗೆ ಕಾರಣವಾದ ನೈಜ ಸಂಗತಿಗಳನ್ನು ಸರ್ಕಾರ ಸ್ವತಂತ್ರ ಹಾಗೂ ಪಾರದರ್ಶಕ ತನಿಖೆಯ ಮೂಲಕ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದೆ.
ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯ ಅಥವಾ ಕಾನೂನು ಉಲ್ಲಂಘನೆ ಕಂಡುಬಂದರೆ, ಸಂಬಂಧಪಟ್ಟ ಕ್ವಾರಿ ಮಾಲೀಕರು, ಗುತ್ತಿಗೆದಾರರು ಹಾಗೂ ಜವಾಬ್ದಾರಿಯಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಅಗತ್ಯವಿದ್ದರೆ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದೆ.
ತಾವರೆಕೆರೆ ಹೋಬಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆಯಿಂದ ಸ್ಥಳೀಯ ಜನರು ಹಲವು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ನಿರಂತರ ಸ್ಫೋಟಗಳಿಂದ ಪರಿಸರ ಹಾನಿಯಾಗುತ್ತಿದೆ, ಧೂಳು ಮಾಲಿನ್ಯದಿಂದ ಜನರು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ
ಈ ಹಿಂದೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಅಂದಿನ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಅಕ್ರಮ ಗಣಿಗಾರಿಕೆಯನ್ನು ತಡೆಯುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ ಪರಿಣಾಮಕಾರಿ ಕ್ರಮ ಕೈಗೊಳ್ಳದ ಕಾರಣ ಇಂತಹ ಗಂಭೀರ ಘಟನೆಗಳು ಮರುಕಳಿಸುತ್ತಿವೆ ಎಂದು ಆರೋಪಿಸಿದೆ.
ಪ್ರಭಾವಿ ಗಣಿಗಾರಿಕಾ ಲಾಬಿಯ ಒತ್ತಡಕ್ಕೆ ಮಣಿದು ಜನರ ಜೀವದೊಂದಿಗೆ ಚೆಲ್ಲಾಟವಾಡಲು ಯಾವುದೇ ಸರ್ಕಾರಕ್ಕೂ ಅಧಿಕಾರವಿಲ್ಲ. ಬಡ ಕಾರ್ಮಿಕರ ಜೀವಕ್ಕಿಂತ ಯಾರ ಆರ್ಥಿಕ ಹಿತಾಸಕ್ತಿಯೂ ದೊಡ್ಡದಲ್ಲ. ಕಾರ್ಮಿಕರ ಸುರಕ್ಷತೆ ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಮೊದಲ ಕರ್ತವ್ಯವಾಗಿದೆ.
ಸುರಕ್ಷತಾ ನಿಯಮಗಳ ಉಲ್ಲಂಘನೆ ಮಾಡಿರುವ ಕ್ವಾರಿ ಮಾಲೀಕರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು,
ತಾವರೆಕೆರೆ ಹೋಬಳಿ ಹಾಗೂ ಸುತ್ತಮುತ್ತಲಿನ ಎಲ್ಲಾ ಅಕ್ರಮ ಗಣಿಗಾರಿಕೆ ಮತ್ತು ಕಾನೂನು ಉಲ್ಲಂಘಿಸುತ್ತಿರುವ ಕಲ್ಲು ಗಣಿಗಾರಿಕೆಗಳ ಪರವಾನಗಿಗಳನ್ನು ತಕ್ಷಣ ಅಮಾನತುಗೊಳಿಸಿ ಸಮಗ್ರ ತನಿಖೆ ನಡೆಸಬೇಕು,
ಮೃತ ಕಾರ್ಮಿಕರ ಕುಟುಂಬಗಳಿಗೆ ಸಮರ್ಪಕ ಪರಿಹಾರ, ಹಾಗೂ ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು, ಈ ದುರಂತಕ್ಕೆ ಕಾರಣರಾದವರು ಯಾರೇ ಆಗಿರಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಬೇಕು, ಜನರ ಜೀವ ಮತ್ತು ಪರಿಸರವನ್ನು ರಕ್ಷಿಸಬೇಕೆಂದು ಆಮ್ ಆದ್ಮಿ ಪಾರ್ಟಿಯ ಯಶವಂತಪುರ ವಿಧಾನಸಭಾ ಕ್ಷೇತ್ರ ನಿಕಟ ಪೂರ್ವ ಎಂಎಲ್ಎ ಅಭ್ಯರ್ಥಿ
ಶಶಿಧರ್ ಸಿ. ಆರಾಧ್ಯ ಒತ್ತಾಯಿಸಿದ್ದಾರೆ.
