ಕೊಳ್ಳೇಗಾಲ: ರಭಸವಾಗಿ ಬೀಸಿದ ಗಾಳಿಗೆ ಬೈಕ್ ಸವಾರ ನಿಯಂತ್ರಣ ತಪ್ಪಿದ ಪರಿಣಾಮ ಮಗನ ಜೊತೆಯಲ್ಲಿ ಬೈಕಿನ ಹಿಂಬದಿ ಕುಳಿತಿದ್ದ ತಾಯಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ತೇರಂಬಳ್ಳಿ ಸಮೀಪ ನಡೆದಿದೆ.
ಕೊಳ್ಳೇಗಾಲ ಮೋಳೆಯ ಮನೆಯಮ್ಮ (52) ಮೃತ ಮಹಿಳೆ.
ಈಕೆ ಬುದುವಾರ ಮಧ್ಯಾಹ್ನ ತನ್ನ ಮಗ ದಿಲೀಪ್ ಜೊತೆ ಸ್ವಗ್ರಾಮ ಕೊಳ್ಳೇಗಾಲ ಮೋಳೆಯಿಂದ ಟಗರುಪುರ ಮೋಳೆಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 212 ರಲ್ಲಿ ಬೈಕ್ ಚಲಾಯಿಸುತ್ತಿದ್ದಾಗ ರಭಸವಾಗಿ ಬೀಸಿದ ಗಾಳಿಗೆ ಬೈಕ್ ಅಲುಗಾಡಿದೆ. ಹಿಂಬದಿಯಲ್ಲಿ ಕುಳಿತಿದ್ದ ತಾಯಿ ಕೆಳಗೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದುದರಿಂದ ಪ್ರಜ್ಞೆ ತಪ್ಪಿದ್ದಾರೆ.
ಆಕೆಯನ್ನು ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದು ವೈದ್ಯರಿಂದ ಪರಿಶೀಲಿಸಿದಾಗ ದಾರಿ ಮಧ್ಯೆಯೆ ಮೃತಪಟ್ಟಿದ್ದಾರೆಂದು ಖಚಿತಪಡಿಸಿದರು.
ವಿಷಯ ತಿಳಿದ ತಕ್ಷಣ ಗ್ರಾಮಾಂತರ ಠಾಣೆ ಎ ಎಸ್ ಐ ಶಂಕರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
