ಮೈಸೂರು: ಪ್ರತಿಯೊಬ್ಬ ನಾಗರೀಕರ
ಮತದಾನದ ಹಕ್ಕನ್ನು ರಕ್ಷಿಸಬೇಕು ಎಂದು
ಪ್ರಜ್ಞಾವಂತ ನಾಗರಿಕ ವೇದಿಕೆ ಆಗ್ರಹಿಸಿದೆ.
ದಾಖಲೆಗಳ ಕೊರತೆಯಿಂದ ಯಾರ ಹೆಸರನ್ನೂ ಮತದಾರರ ಪಟ್ಟಿಯಿಂದ ತೆಗೆಯದಂತೆ ಅಗತ್ಯ ಕ್ರಮವಹಿಸಬೇಕು ಎಂದು ಒತ್ತಾಯಿಸಿ ಪ್ರಜ್ಞಾವಂತ ನಾಗರಿಕ ವೇದಿಕೆಯ ಪದಾಧಿಕಾರಿಗಳು ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ತಹಶೀಲ್ದಾರರಾದ ಎಸ್ ಶಿವಪ್ರಸಾದ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಯಾರಿಗೆ ಚುನಾವಣಾ ಆಯೋಗ ನಿಗದಿಪಡಿಸಿರುವ 11 ದಾಖಲೆಗಳ ಪೈಕಿ ಒಂದು ದಾಖಲೆಯನ್ನೂ ಒದಗಿಸಲು ಸಾಧ್ಯವಿಲ್ಲವೋ ಅಂತಹವರಿಗೆ, ಜನನ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಕಾಯಂ ವಾಸ ದೃಢೀಕರಣ ಪತ್ರ, ಇತ್ಯಾದಿ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ ನಿಯಮಗಳನ್ನು ಸರಳಗೊಳಿಸಬೇಕು ಎಂದು ಕೋರಿದರು.
ಸುಲಭವಾಗಿ ಮತ್ತು ಶೀಘ್ರವಾಗಿ ದಾಖಲೆಗಳನ್ನು ರಾಜ್ಯ ಸರ್ಕಾರವೇ ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ದಾಖಲೆಯಿಲ್ಲ ಎಂಬ ಕಾರಣಕ್ಕೆ ಆತಂಕಕ್ಕೆ ಒಳಗಾಗುವ ಜನರಲ್ಲಿ ವಿಶ್ವಾಸವನ್ನು ತುಂಬುವ ದೃಷ್ಟಿಯಿಂದ, ಮತದಾರರಿಗೆ ಆಗುವ ಅನಗತ್ಯ ವೆಚ್ಚ, ಸಮಯ, ತಾಪತ್ರಯಗಳನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು
‘ತಾರ್ಕಿಕ ವ್ಯತ್ಯಾಸ’ ಹೆಸರಿನಲ್ಲಿ ಪರಿಷ್ಕರಣೆಯನ್ನು ಕರ್ನಾಟಕ ದಲ್ಲಿ ಅಳವಡಿಸದಂತೆ ಚುನಾವಣಾ ಆಯುಕ್ತರಿಗೆ ರಾಜ್ಯ ಸರ್ಕಾರ ಮನವಿ ಸಲ್ಲಿಸಬೇಕು. ಹೆಸರುಗಳ ಉಪನಾಮ, ಇನಿಷಿಯಲ್ ವ್ಯತ್ಯಾಸ, ವಯಸ್ಸಿನ ಅಂತರ ಕಡಿಮೆ ಅಥವಾ ಹೆಚ್ಚಿದೆ, ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ಮತದಾರರ ಪಟ್ಟಿಯಿಂದ ಕೈ ಬಿಡದಂತೆ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲು ಚುನಾವಣಾ ಆಯೋಗಕ್ಕೆ ಕೋರಬೇಕು ಎಂದು ಒತ್ತಾಯಿಸಿದರು
ಯಾವುದೇ ಒಬ್ಬ ಭಾರತೀಯರಲ್ಲದವರನ್ನು ಗುರುತು ಹಚ್ಚುವ ಕೆಲಸ ಸರ್ಕಾರದ ಗೃಹ ಇಲಾಖೆಗೆ ಸಂಬಂಧಿಸಿದ್ದು. ಅದು ಚುನಾವಣಾ ಆಯೋಗದ್ದಲ್ಲ, ಆದರೆ ಎಸ್ಐಆರ್ ಮೂಲಕ ಪ್ರತಿಯೊಬ್ಬರನ್ನು ಕಟಕಟೆಗೆ ನಿಲ್ಲಿಸುವ ಪ್ರಕ್ರಿಯೆ ಸರಿಯಾದುದ್ದಲ್ಲ ಎಂದು ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೋಳ ಜಗದೀಶ್ ಹೇಳಿದರು.
ಈ ಸಂದರ್ಭದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೋಳ ಜಗದೀಶ್, ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್, ಎಸ್ ಎನ್ ರಾಜೇಶ್, ರಾಕೇಶ್, ಹರೀಶ್ ಮತ್ತಿತರರು ಹಾಜರಿದ್ದರು.
