ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಿಮಾನ ಅಪಘಾತಗೊಂಡು ಎಂಟು ಮಂದಿ ಮೃತಪಟ್ಟಿದ್ದಾರೆ.
ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ
ನಿನ್ನೆ ಬೆಳಿಗ್ಗೆ ವಿಮಾನ ಪತನಗೊಂಡಿದೆ. ಯುಎಸ್ ವಾಯುಪಡೆಯ ಪ್ರಮುಖ ಕೇಂದ್ರವಾದ ಎಡ್ವರ್ಡ್ಸ್ ವಾಯುನೆಲೆಯಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಬಿ-52 ಬಾಂಬರ್ ವಿಮಾನ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಂಟು ಜನರು ದುರ್ಮರಣಕ್ಕೀಡಾಗಿದ್ದಾರೆ.
ಸೋಮವಾರ ಬೆಳಿಗ್ಗೆ ಸುಮಾರು 11:20 ರ ವೇಳೆಗೆ ಈ ಭೀಕರ ಅಪಘಾತ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ ಎಂದು ವಾಯುನೆಲೆಯ ಅಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಎಂದಿನಂತೆ ಪರೀಕ್ಷಾ ಕಾರ್ಯಾಚರಣೆಗೆ ಎಂಟು ಜನರನ್ನು ಹೊತ್ತೊಯ್ಯುತ್ತಿದ್ದ ವಾಯುಪಡೆಯ ಬಿ -52 ಸ್ಟ್ರಾಟೋಫೋರ್ಟ್ರೆಸ್ ವಿಮಾನವು ಟೇಕ್ ಆಫ್ ಆದ ಕೆಲ ಹೊತ್ತಿನಲ್ಲೇ ಪತನಗೊಂಡಿದೆ.
ಅಪಘಾತದ ಕಾರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ‘ಎಡ್ವರ್ಡ್ಸ್ ವಾಯುನೆಲೆ ತಿಳಿಸಿದೆ.
ಘಟನೆಯ ನಂತರ ವಾಯುನೆಲೆಯನ್ನು ತಕ್ಷಣವೇ ಬಂದ್ ಮಾಡಲಾಯಿತು. ಒಳ ಬರುವ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಯಿತು.ರಕ್ಷಣಾ ಕಾರ್ಯಾಚರಣೆ ಹಿನ್ನೆಲೆಯಲ್ಲಿ ವಾಣಿಜ್ಯೇತರ ಹಾಗೂ ಸಾಮಾನ್ಯ ಸಂದರ್ಶಕರ ಪಾಸ್ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
