ಬೆಂಗಳೂರು: ಬಾಗಲಕೋಟೆ ಜಿಲ್ಲೆ, ರಬಕವಿ-ಬನಹಟ್ಟಿ ತಾಲೂಕಿನ ರೈತರ ಪಾಲಿಗೆ ವರದಾನವಾಗಬೇಕಿದ್ದ ವೆಂಕಟೇಶ್ವರ ಏತ ನೀರಾವರಿ ಯೋಜನೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಬೇಜವಾಬ್ದಾರಿ ತನದಿಂದಾಗಿ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಸಾರ್ವಜನಿಕರ 174.42 ಕೋಟಿ ರೂಪಾಯಿ ನೀರಾವರಿ ಹೆಸರಿನಲ್ಲಿ ವೆಚ್ಚವಾಗಿ ಎರಡುೂವರೆ ವರ್ಷಗಳೇ ಕಳೆದರೂ ರೈತರ ಜಮೀನಿಗೆ ಒಂದಿ ಹನಿ ನೀರು ಬರಲಿಲ್ಲ ಎಂದು ಟ್ವೀಟ್ ಮಾಡಿ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕರೇ ಎಲ್ಲಿಗೆ ಹೋಯಿತು 174 ಕೋಟಿ ರೂಪಾಯಿ ಹಣ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಕೃಷ್ಣಾ ನದಿಯಿಂದ 0.75 ಟಿಎಂಸಿ ನೀರನ್ನು ಬಳಸಿಕೊಂಡು ಸುಮಾರು 17,991 ಎಕರೆ ಒಣ ಭೂಮಿಗೆ ನೀರುಣಿಸುವ ಭವ್ಯ ಆಶ್ವಾಸನೆ ನೀಡಿದ್ದಿರಲ್ಲ, ಆ ನೀರೆಲ್ಲಾ ನಿಮ್ಮ ಭ್ರಷ್ಟಾಚಾರದ ಜೇಬಿಗೆ ಹರಿದುಹೋಯಿತೇ ಎಂದು ಪ್ರತಿಪಕ್ಷ ನಾಯಕ ತರಾಟೆಗೆ ತೆಗೆದುಕೊಂಡಿದ್ದಾರೆ.
ಕುಲಹಳ್ಳಿ, ಪ್ರಸಿದ್ಧ ಜಾಕ್ವೆಲ್ ಬಳಿ ನೀರು ಪೂರೈಕೆ ಮಾಡುವ ನಾಟಕವಾಡಿದ ರಾಜ್ಯ ಸರ್ಕಾರ, ಜಮೀನು ಕಳೆದುಕೊಂಡ ಬಡ ರೈತರಿಗೆ ಇನ್ನೂ ಸೂಕ್ತ ಪರಿಹಾರ ಧನ ಕೊಡಲಿಲ್ಲ ಎಂದು ಆರೋಪಿಸಿದ್ದಾರೆ.
ಇದು ಕೇವಲ ಆಡಳಿತದ ವೈಫಲ್ಯವಲ್ಲ, ರೈತರಿಗೆ ಮಾಡಿದ ಮಹಾ ದ್ರೋಹ. ಜಗದಾಳ, ನಾವಲಗಿ, ಕುಲಹಳ್ಳಿ, ಹುಲ್ಯಾಳ, ಮರೆಗುದ್ದಿ, ಬುದ್ದಿ, ಮಾಲಾಪುರ, ಚಿಮ್ಮಡ ಭಾಗದ ಸಾವಿರಾರು ರೈತರು ಸರ್ಕಾರದ ಕಚೇರಿಗಳಿಗೆ ಅಲೆದು ಅಲೆದು ಸಾಕಾಗಿ, ಬೇಸತ್ತು ಹೋಗಿದ್ದಾರೆ.
ಯೋಜನೆ ಮುಗಿದರೂ ನೀರು ಬರಲಿಲ್ಲ, ಇತ್ತ ಹಕ್ಕಿನ ಪರಿಹಾರ ಹಣವೂ ಸಿಗಲಿಲ್ಲ. ಸರ್ಕಾರದ ಈ ವಂಚನೆಯಿಂದ ಕಂಗೆಟ್ಟ ರೈತರು ಕೊನೆಗೆ ತಮ್ಮದೇ ಜಮೀನಿನಲ್ಲಿ ಹಾದುಹೋಗಿದ್ದ ಮುಖ್ಯ ಮತ್ತು ಉಪ ಕಾಲುವೆಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚಿ ಅದರ ಮೇಲೆ ಬೆಳೆ ಬೆಳೆಯುವಂತಾಗಿದೆ ಎಂದರೆ ಈ ದರಿದ್ರ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಜರಿದಿದ್ದಾರೆ.
ಅಧಿಕಾರಿಗಳು ಮತ್ತು ಶಾಸಕರು ಕೇವಲ ಮೂರ್ನಾಲ್ಕು ತಿಂಗಳಲ್ಲಿ ಪರಿಹಾರ ನೀಡುತ್ತೇವೆ ಎಂದು ಸವಕಲು ಭರವಸೆಗಳನ್ನಷ್ಟೇ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಕುರ್ಚಿಗಾಗಿ ಹೈಕಮಾಂಡ್ ಬಳಿ ಲಾಬಿ ಮಾಡಲು ದಿನಬೆಳಗಾದರೆ ವಿಮಾನ ಹತ್ತುವ ಕಾಂಗ್ರೆಸ್ ನಾಯಕರಿಗೆ ರೈತರ ಕಣ್ಣೀರು ಕಾಣಿಸುತ್ತಿಲ್ಲವೇ? ಕಾಗದದ ಮೇಲೆ ಮಾತ್ರ ನೀರಾವರಿ ಯೋಜನೆಗಳನ್ನು ಸೃಷ್ಟಿಸಿ, ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿರುವ ಈ ಭ್ರಷ್ಟ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಡಲಿದೆ ಎಂದು ಅಶೋಕ ಎಚ್ಚರಿಸಿದ್ದಾರೆ.
ವಂಚನೆಗೊಳಗಾದ ಪ್ರತಿಯೊಬ್ಬ ರೈತನಿಗೂ ತಕ್ಷಣವೇ ಸಂಪೂರ್ಣ ಪರಿಹಾರ ಧನ ವಿತರಿಸಬೇಕು ಮತ್ತು ಕಾಲುವೆಗಳಿಗೆ ನೀರು ಹರಿಸಬೇಕು ಇಲ್ಲದಿದ್ದರೆ ಸರ್ಕಾರದ ವಿರುದ್ಧ ಜನರೇ ದಂಗೆ ಏಳಲಿದ್ದಾರೆ ಎಂದು ಹೇಳಿದ್ದಾರೆ.
