ನಂಜನಗೂಡು, ಜೂ. 1: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದು ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಂ.ಎಸ್. ರಾಮಪ್ರಸಾದ್ ತಿಳಿಸಿದರು.
ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಹಾ ಪೋಷಕರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶಿಕ್ಷಣವು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ವ್ಯಕ್ತಿತ್ವ ನಿರ್ಮಾಣ, ಸಾಮಾಜಿಕ ಜವಾಬ್ದಾರಿ ಮತ್ತು ಜೀವನ ಕೌಶಲ್ಯಗಳ ಬೆಳವಣಿಗೆಯನ್ನೂ ಒಳಗೊಂಡಿರಬೇಕು ಎಂದು ಹೇಳಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವುದು ಪೋಷಕರ ಪ್ರಮುಖ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು.
ಮಕ್ಕಳ ಶೈಕ್ಷಣಿಕ ಸಾಧನೆಯ ಜೊತೆಗೆ ಅವರ ಮಾನಸಿಕ ಆರೋಗ್ಯ, ಮೌಲ್ಯಗಳು ಹಾಗೂ ಸಾಮಾಜಿಕ ನಡವಳಿಕೆಗಳ ಮೇಲೂ ಪೋಷಕರು ಗಮನಹರಿಸಬೇಕು ಎಂದು ರಾಮಪ್ರಸಾದ್ ತಿಳಿಹೇಳಿದರು.
ಆಂಗ್ಲ ಭಾಷೆ ಉಪನ್ಯಾಸಕ ರಂಗಸ್ವಾಮಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸುವುದಷ್ಟೇ ಅಲ್ಲದೆ, ಸಂವಹನ ಕೌಶಲ್ಯ, ನಾಯಕತ್ವ ಗುಣ, ಸಮಸ್ಯೆ ಪರಿಹಾರ ಸಾಮರ್ಥ್ಯ ಮತ್ತು ತಂತ್ರಜ್ಞಾನದ ಜ್ಞಾನ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
ಪೋಷಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರದೆ ಅವರ ಆಸಕ್ತಿ ಮತ್ತು ಪ್ರತಿಭೆ ಗುರುತಿಸಿ ಸೂಕ್ತ ಬೆಂಬಲ ನೀಡಬೇಕು ಎಂದು ತಿಳಿಸಿದರು.
ಕಾಲೇಜಿನ ಶೈಕ್ಷಣಿಕ ಮತ್ತು ಆಡಳಿತಾತ್ಮಕ ನಿಯಮಗಳ ಕುರಿತು ಮಾತನಾಡಿದ ಹಿರಿಯ ಉಪನ್ಯಾಸಕ ಎಸ್ ಲಿಂಗಣ್ಣಸ್ವಾಮಿ ಅವರು, ವಿದ್ಯಾರ್ಥಿಗಳ ಹಾಜರಾತಿ, ಶಿಸ್ತು, ಪರೀಕ್ಷಾ ಕ್ರಮ, ಆಂತರಿಕ ಮೌಲ್ಯಮಾಪನ, ಗ್ರಂಥಾಲಯ ಬಳಕೆ ಹಾಗೂ ಕಾಲೇಜಿನ ವಿವಿಧ ಸೌಲಭ್ಯಗಳ ಕುರಿತು ಪೋಷಕರಿಗೆ ವಿವರವಾದ ಮಾಹಿತಿ ನೀಡಿದರು.
ಕಾಲೇಜಿನಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ಪಾಲಿಸುವುದರಿಂದ ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ವರ್ತನೆ ಬೆಳೆಯುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ಗುಣಮಟ್ಟ ಕಾಪಾಡಲು ಕಾಲೇಜು ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಪೋಷಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಸಿ.ಆರ್ ದಿನೇಶ್ ಅವರು ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸು ಉಪನ್ಯಾಸಕರು ಮತ್ತು ಪೋಷಕರ ಜಂಟಿ ಪ್ರಯತ್ನದ ಫಲವಾಗಿದೆ ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆ ಮತ್ತು ಕುಟುಂಬದ ನಡುವಿನ ನಿರಂತರ ಸಂಪರ್ಕದಿಂದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಸುಲಭವಾಗಿ ಗುರುತಿಸಿ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಜೊತೆಗೆ ನೈತಿಕ ಮೌಲ್ಯಗಳು, ನಾಯಕತ್ವ ಗುಣಗಳು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಲು ವಿಶೇಷ ಒತ್ತು ನೀಡುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಹಾಜರಾತಿ, ಪರೀಕ್ಷಾ ಫಲಿತಾಂಶಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ, ವೃತ್ತಿ ಮಾರ್ಗದರ್ಶನ ಹಾಗೂ ಮುಂದಿನ ಶೈಕ್ಷಣಿಕ ಯೋಜನೆಗಳ ಕುರಿತು ಪೋಷಕರೊಂದಿಗೆ ಮುಕ್ತ ಸಂವಾದ ನಡೆಸಲಾಯಿತು.
ಪೋಷಕರಾದ ದೇವರಾಜ್ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಪ್ರಶ್ನೆಗಳನ್ನು ಕೇಳಿ ಸಲಹೆಗಳನ್ನು ನೀಡಿದರು.ಸುಮಿತ್ರ ಅವರು ಕಾಲೇಜಿನ ಶೈಕ್ಷಣಿಕ ಗುಣಮಟ್ಟ, ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳು ಹಾಗೂ ಆಡಳಿತದ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪನ್ಯಾಸಕರಾದ ಡಾ.ಟಿ.ಕೆ.ರವಿ, ಹೆಚ್.ಕೆ ಸ್ವಾಮಿ ಗೌಡ, ಅದಿಲ್ಹ ಹುಸೇನ್, ಕಾಲೇಜು ಅಭಿವೃದ್ಧಿ ಸದಸ್ಯರಾದ ಜಗದೀಶ್, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
