ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಏಕಾಏಕಿ 993 ರೂ.
ಹಾಗೂ ಪ್ರತಿ ಲೀಟರ್ ಆಟೋ ಗ್ಯಾಸ್ ಬೆಲೆಯನ್ನು 45 ರೂ. ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ನಡೆಯನ್ನು ಆಮ್ ಅದ್ಮಿ ಪಕ್ಷ ತೀವ್ರವಾಗಿ ಖಂಡಿಸಿದೆ.
ಕೇಂದ್ರದ ದುರುಳ ನೀತಿ ಒಂದು ಕಡೆ ಆದರೆ ಮತ್ತೊಂದು ಕಡೆ ರಾಜ್ಯ ಸರ್ಕಾರ ಬೆಸ್ಕಾಂ ನ 2,000 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿರುವುದನ್ನು ಗ್ರಾಹಕರ ಬಳಿ ವಸೂಲಿ ಮಾಡಲು 56 ಪೈಸೆಗಳಷ್ಟು ಪ್ರತಿ ಯೂನಿಟ್ ಗೆ ಏರಿಕೆ ಮಾಡಿದೆ.
ಈ ಮೂಲಕ ಕಾರ್ಮಿಕ ದಿನಾಚರಣೆ ದಿನವೇ ದೇಶದ ಜನಸಾಮಾನ್ಯನಿಗೆ ಈ ಎರಡೂ ಸರ್ಕಾರಗಳು ನೀಡುತ್ತಿರುವ ಮಹಾನ್ ಕೊಡುಗೆ. ಈ ಜನ ವಿರೋಧಿ ನೀತಿಯನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ತಿಳಿಸಿದ್ದಾರೆ
ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳೆರಡೂ ಜನವಿರೋಧಿಗಳಾಗಿದ್ದು ಪ್ರತಿ ದಿವಸ ಜನಸಾಮಾನ್ಯನ ಜೇಬಿಗೆ ಯಾವ ರೀತಿ ಕತ್ತರಿ ಹಾಕಬೇಕೆಂಬ ಕುಟಿಲ ತಂತ್ರಗಾರಿಕೆಯಲ್ಲಿ ಕಾಲ ಕಳೆಯುತ್ತಿವೆ ಎಂದು ಆರೋಪಿಸಿದ್ದಾರೆ.
ದೇಶದ ವಿದೇಶಾಂಗ ನೀತಿ ಸಂಪೂರ್ಣ ವೈಫಲ್ಯ ಒಂದು ಕಡೆಯಾದರೆ ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ವ್ಯಾಪಕ ಭ್ರಷ್ಟಾಚಾರ ನೀತಿಯಿಂದಾಗಿ ಸಂಪೂರ್ಣ ಆರ್ಥಿಕ ದಿವಾಳಿಯಾಗಿದೆ,ಅತಿಯಾದ ಬೆಲೆ ಏರಿಕೆಯಿಂದಾಗಿ ದೇಶದ ಜನಸಾಮಾನ್ಯ ಪ್ರತಿ ದಿವಸದ ಜೀವನ ನಿರ್ವಹಣೆಯೇ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿನ ಮಹಿಳೆಯರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ವಿದ್ಯಾವಂತ ಯುವಕರುಗಳು, ಜನಸಾಮಾನ್ಯರು ಬೀದಿಗಿಳಿದು ಹೋರಾಟ ಮಾಡುವ ತನಕ ಈ ಭ್ರಷ್ಟ ಸರ್ಕಾರಗಳಿಗೆ ಬುದ್ಧಿ ಬರುವುದು ಸಾಧ್ಯವಿಲ್ಲ.
ಸರ್ಕಾರಗಳು ಕೂಡಲೇ ಈ ಬೆಲೆ ಏರಿಕೆಯನ್ನು ವಾಪಸ್ ತೆಗೆದುಕೊಳ್ಳದಿದ್ದಲ್ಲಿ ಜನಸಾಮಾನ್ಯರ ಜೊತೆಗೂಡಿ ಬೀದಿಗಿಳಿದು ಆಮ್ ಆದ್ಮಿ ಪಕ್ಷ ಹೋರಾಟ ಮಾಡುತ್ತದೆ ಎಂದು ಜಗದೀಶ್ ವಿ. ಸದಂ ಎಚ್ಚರಿಸಿದ್ದಾರೆ.
