ಯಳಂದೂರು: ಯಳಂದೂರು ತಾಲೂಕಿನ ಹೊನ್ನೂರು ಗ್ರಾಮಾದಲ್ಲಿ ಚರಂಡಿ ಸ್ಲ್ಯಾಬ್ ಕುಸಿದು ಸಂಚಾರಕ್ಕೆ ಅಡ್ಡಿಯಾಗಿದ್ದು ನಿವಾಸಿಗಳಿಗೆ ತುಂಬಾ ತೊಂದರೆಯಾಗಿದೆ.
ಕೂಡಲೇ ಗ್ರಾಮ ಪಂಚಾಯತಿ ಅಧಿಕಾರಿಗಳು ಗಮನ ಹರಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ 6ನೇ ವಾರ್ಡಿನ ಲಾಲಿ ಸಿದ್ದಯ್ಯ ಮನೆಯಿಂದ ಪರಿಶಿಷ್ಟ ಜನಾಂಗದವರು ವಾಸಿಸುವ ಮನೆಗಳಿಗೆ ತೆರಳುವ ಜಾಗದಲ್ಲಿ ಅಡ್ಡಲಾಗಿ ನಿರ್ಮಿಸಿರುವ ಚರಂಡಿಯ ಸ್ಲ್ಯಾಬ್ ಕುಸಿದಿದೆ.
ಸ್ಲ್ಯಾಬ್ ಕುಸಿದು ಒಂದು ತಿಂಗಳು ಕಳೆದರೂ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ, ಆಡಳಿತ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ ಎಂದು ಸ್ಥಳೀಯರಾದ ಎಸ್.ಪುಟ್ಟಸ್ವಾಮಿ ಹೊನ್ನೂರು ಬೇಸರ ವ್ಯಕ್ತ ಪಡಿಸಿದ್ದಾರೆ.
ನಾವು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಇದರಿಂದ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳಿಗೆ ತೊಂದರೆಯಾಗಿದೆ.
ಇವರೆಲ್ಲಾ ಇದೇ ರಸ್ತೆ ಮೂಲಕ ತೆರಳಬೇಕಾದ ಪರಿಸ್ಥಿತಿ ಇದೆ.
ಚರಂಡಿ ಸ್ಲ್ಯಾಬ್ ಕುಸಿತದಿಂದ ದ್ವಿಚಕ್ರ ವಾಹನಗಳು ತೆರಳಲು ಸಾಧ್ಯವಾಗದ ಪರಿಸ್ಥಿತಿ ಇದೆ,ಇದಲ್ಲದೆ ವೃದ್ದರು, ಸಣ್ಣ ಮಕ್ಕಳು ತಿರುಗಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.ರಾತ್ರಿ ಕೇಳುವಂತೆಯೇ ಇಲ್ಲ.
ಕೂಡಲೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನ ಹರಿಸಿ ಚರಂಡಿಯ ಕುಸಿದಿರುವ ಸ್ಲ್ಯಾಬ್ ದುರಸ್ತಿಪಡಿಸಿ ನಿವಾಸಿಗಳು ವಾಸಿಸಲು ಅನುಕೂಲ ಕಲ್ಪಿಸಬೇಕು ಮತ್ತು ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುವರೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಎಸ್.ಪುಟ್ಟಸ್ವಾಮಿ ಹೊನ್ನೂರು ಹೇಳಿದ್ದಾರೆ.
