ಮೈಸೂರು: ಗಾಂಜಾ ಮಾರಾಟ ಆರೋಪಿಗೆ 2 ವರ್ಷಗಳ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಕೆ.ಎಂ.ರವಿ ಎಂಬಾತನುಗೆ ಶಿಕ್ಷೆ ವಿಧಿಸಲಾಗಿದೆ.
ಮೈಸೂರು ಜಿಲ್ಲೆ, ಹುಣಸೂರು ತಾ. ಕಲ್ಕುಣಿಕೆ ಸರ್ಕಲ್, ಶನಿಮಹಾತ್ಮ ದೇವಸ್ಥಾನದ ಹತ್ತಿರ ಬಸ್ ನಿಲ್ದಾಣದ ಪಕ್ಕ ಕೆ.ಆರ್.ನಗರ ಮುಖ್ಯ ರಸ್ತೆ, ಫುಟ್ಪಾತ್ನಲ್ಲಿ 17-7-2024 ರಂದು ಸಂಜೆ ಆರೋಪಿ ಕೆ.ಎಂ.ರವಿ ಕಟ್ಟೆಮಳಲವಾಡಿ ಕಡೆಯಿಂದ ಕೈಯಲ್ಲಿ ಪ್ಲಾಸ್ಟಿಕ್ ಚೀಲವನ್ನು ಹಿಡಿದು ಅನುಮಾನಾಸ್ಪವಾಗಿ ನಡೆದುಕೊಂಡು ಬಸ್ ನಿಲ್ದಾಣದ ಬಳಿ ಬಂದಾಗ ಸೆನ್ ಕ್ರೈಂ, ಪೊಲೀಸ್ ಉಪಾಧೀಕ್ಷಕರು ರಘು ಎನ್. ಮತ್ತು ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದರು.
ಗಾಂಜಾ ಸೊಪ್ಪನ್ನು ನ್ಯಾಯಾಲಯದಲ್ಲಿ ಇನ್ವೆಂಟರಿ ಮಾಡಿಸಿ, ನಂತರ ಆರ್.ಎಫ್.ಎಸ್.ಎಲ್ ಗೆ ಪರೀಕ್ಷೆಗಾಗಿ ಸಲ್ಲಿಸಿದ್ದು, ತಜ್ಞರು ಗಾಂಜಾ ಸೊಪ್ಪು ಎಂದು ವರದಿ ನೀಡಿರುವುದು ತನಿಖೆಯಿಂದ ದೃಢಪಟ್ಟ ಮೇರೆಗೆ ಆರೋಪಿಯ ವಿರುದ್ಧ ತನಿಖಾಧಿಕಾರಿ ಲಮಣಿ ಸುಷ್ಮಾ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ರಮೇಶ ಅವರು ಅಭಿಯೋಜನೆಯು ಹಾಜರುಪಡಿಸಿದ ಸಾಕ್ಷಾಧಾರಗಳನ್ನು ಪರಿಶೀಲಿಸಿ, ಈತನ ಅಪರಾಧಕ್ಕೆ 2 ವರ್ಷಗಳ ಕಠಿಣ ಶಿಕ್ಷೆ ಮತ್ತು 20,000 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡ ಪಾವತಿಸಲು ತಪ್ಪಿದರೆ 3 ತಿಂಗಳ ಸಾದಾ ಕಾರಾವಾಸ ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ.
ಈ ಪ್ರಕರಣದಲ್ಲಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಎನ್.ಬಿ.ವಿಜಯಲಕ್ಷ್ಮಿ ಸರ್ಕಾರದ ಪರ ವಾದ ಮಂಡಿಸಿದರು.
