ಮೈಸೂರು: ಇವತ್ತೆಲ್ಲಾ ಮೈಸೂರಿನ ಸಿದ್ಧಾರ್ಥ ನಗರದಲ್ಲಿ ಚಿರತೆಯದೇ ಸುದ್ದಿ.
ಸಿದ್ಧಾರ್ಥ ನಗರದ ಕೈವಲ್ಯ ಮಾರ್ಗದ ಮನೆಯೊಂದರಲ್ಲಿ ಶುಕ್ರವಾರ ಬೆಳ್ಳಂಬೆಳಿಗ್ಗೆ ಚಿರತೆ ಕಾಣಿಸಿ ಆತಂಕ ಹುಟ್ಟಿಸಿತು.
ಸುಮಾರು 6 ಗಂಟೆ ಸಮಯದಲ್ಲಿ ಕೈವಲ್ಯ ಮಾರ್ಗದ ಮಾದಯ್ಯ ಎಂಬುವರ ಮನೆಯವರಿಗೆ ಚಿರತೆ ಕಾಣಿಸಿದೆ.ತಕ್ಷಣ ಅರಣ್ಯ ಇಲಾಖೆಗೆ ಮತ್ತು ಝೂಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಧಾವಿಸಿ ಎಲ್ಲಾ ಕಡೆ ಚಿರತೆ ಹುಡುಕಿ ಅದು ಸಿಗದೆ ಮನೆಯವರಿಗೆ ಧೈರ್ಯ ಹೇಳಿ ವಾಪಸ್ ಆಗಿದ್ದಾರೆ.
ಆದರೆ ಚಿರತೆ ಅದು ಯಾವುದೊ ಮಾಯದಲ್ಲಿ ಮಾದೇವಯ್ಯ ಅವರ ಪಕ್ಕದ ಸುರೇಶ್ ಎಂಬವರ ಮನೆಗೆ ಹೋಗಿ ಸೇರಿಕೊಂಡಿದೆ.
ಸುರೇಶ್ ಅವರ ತಾಯಿ ಮಲಗಿದ್ದ ರೂಮ್ ನ ಮಂಚದ ಕೆಳಗೆ ಚಿರತೆ ಹೋಗಿ ಆರಾಮಾಗಿ ಮಲಗಿಬಿಟ್ಟಿದೆ.
ಸುರೇಶ್ ಅವರ ಮನೆಯ ಕೆಲಸದಾಕೆ ಬಂದು ಕಸ ಗುಡಿಸಲು ಹೋದಾಗ ಚಿರತೆ ಇರುವುದು ಗೊತ್ತಾಗಿ ಕೂಗಿಕೊಂಡು ಹೊರಗೆ ಬಂದು ಮನೆಯವರಿಗೆ ಚಿರತೆ ಇರುವುದನ್ನು ಹೇಳಿದ್ದಾರೆ.
ತಕ್ಷಣ ಸುರೇಶ್ ಅವರ ಪತ್ನಿ ಧಾವಿಸಿ ಬೇರೆ ಏನನ್ನೂ ಯೋಚಿಸದೆ ಧೈರ್ಯದಿಂದ ಮಂಚದ ಮೇಲೆ ಮಲಗಿದ್ದ ತಮ್ಮ ಅತ್ತೆಯನ್ನು ಎಳೆದು ತಂದಿದ್ದಾರೆ.
ನಂತರ ಸುರೇಶ್ ಚಿರತೆ ಮಲಗಿದ್ದ ರೂಮ್ ಲಾಕ್ ಮಾಡಿ ತಾಯಿ ಮತ್ತು ಪತ್ನಿ ಇಬ್ಬರನ್ನು ಎಬ್ಬಿಸಿ ನಂತರ ಅರಣ್ಯ ಇಲಾಖೆಗೆ ಝೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅರಣ್ಯ ಅಧಿಕಾರಿಗಳು ಮತ್ತು ಮೈಸೂರು ಝೂ ಅಧಿಕಾರಿಗಳು ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಜನರಿಗೆ ಸಾವಧಾನವಾಗಿ ಇರುವಂತೆ ಹೇಳಿ ಚಿರತೆಯನ್ನು ಯಶಸ್ವಿಯಾಗಿ ಹಿಡಿದು ಕೊಂಡೊಯ್ದಿದ್ದಾರೆ.
ಚಿರತೆ ಬಂದಿದ್ದ ಸುದ್ದಿ ಕೇಳಿ ಸುತ್ತಮುತ್ತಲಿನ ಜನ ಧಾವಿಸಿದ್ದರು.
ಚಿರತೆ ಹಿಡಿದು ಕೊಂಡೊಯ್ದರೂ ಕೂಡಾ ಈಗಲೂ ಸಿದ್ದಾರ್ಥ ನಗರದ ಜನತೆ ಹೊರಗೆ ಹೋಗುವುದು ಹೇಗೆ ವಾಕಿಂಗ್ ಗೆ ಹೋಗುವುದು ಹೇಗೆ ಎಂಬ ಚಿಂತೆ ಆತಂಕದಲ್ಲಿ ನಗರದ ಜನತೆ ಇದ್ದಾರೆ.

